ಪುಣೆ : ಮಹಾರಾಷ್ಟ್ರದ ಪುಣೆ ನಗರದಲ್ಲಿ ಗುರುವಾರ ಮಧ್ಯಾಹ್ನ ವರುಣ ಅಬ್ಬರಿಸಿದ್ದು, ಅನಿರೀಕ್ಷಿತ ಭಾರಿ ಮಳೆಯಿಂದಾಗಿ ಇಡೀ ನಗರ ತಲ್ಲಣಗೊಂಡಿದೆ. ಕೊಂಡ್ವಾ, ಉತ್ತಮ ನಗರ ಮತ್ತು ಹಡಪ್ಸರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ ಮೇಘಸ್ಫೋಟಕ್ಕೆ ಸದೃಶವಾದ ಮಳೆ ಸುರಿದ ಪರಿಣಾಮ,ರಸ್ತೆಗಳು ನದಿಗಳಂತೆ ಮಾರ್ಪಾಡಾಗಿದ್ದು, ಪುಣೇಕರರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನಗರದ ಹಲವು ಭಾಗಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಖಡಕ್‌ವಾಸ್ಲಾದಲ್ಲಿ 99 ಮಿಮೀ, ಸಿಂಹಗಡ ರಸ್ತೆಯಲ್ಲಿ 94.8 ಮಿಮೀ, ಕೊತ್ರುಡ್‌ನಲ್ಲಿ 64.8 ಮಿಮೀ ಮತ್ತು ವಾರ್ಜೆಯಲ್ಲಿ 56.4 ಮಿಮೀ ಮಳೆ ದಾಖಲಾಗಿದೆ. ಈ ಅನಿರೀಕ್ಷಿತ ಮಳೆ ಪುಣೆ ನಗರದ ಸಾರ್ವಕಾಲಿಕ ದಾಖಲೆಗಳಲ್ಲಿ ಒಂದಾಗಿದೆ.
ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ನದಿಗಳಂತೆ ಭಾಸವಾಗುತ್ತಿವೆ. ಅನೇಕ ವಾಹನಗಳು ನೀರಿನಲ್ಲಿ ಮುಳುಗಿ ತೇಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಜನರು ಗಂಟೆಗಟ್ಟಲೆ ರಸ್ತೆಗಳಲ್ಲಿ ಸಿಲುಕಿ ಪರದಾಡಿದ್ದಾರೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಪುಣೆ ಸೇರಿದಂತೆ ನಾಸಿಕ್, ಜಲಗಾಂವ್ ಮತ್ತು ಛತ್ರಪತಿ ಸಂಭಾಜಿನಗರ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಇದಲ್ಲದೆ, ರಾಜ್ಯದ ವಿದರ್ಭ ಮತ್ತು ಕೊಂಕಣ ಪ್ರದೇಶಗಳಲ್ಲಿ 'ಯೆಲ್ಲೋ ಅಲರ್ಟ್' ಮುಂದುವರಿಯಲಿದೆ ಎಂದು ತಿಳಿಸಿದೆ.
ಶುಕ್ರವಾರವೂ ಪುಣೆ, ನಾಸಿಕ್ ಮತ್ತು ಸೋಲಾಪುರ ಭಾಗಗಳಲ್ಲಿ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಆರಂಭದಲ್ಲಿ ಸುರಿಯುತ್ತಿರುವ ಈ ಅಕಾಲಿಕ ಮಳೆಯು ಮುಂದಿನ ಕೆಲವು ದಿನಗಳ ಕಾಲ ಮಹಾರಾಷ್ಟ್ರದ ಹಲವೆಡೆ ಮುಂದುವರಿಯಲಿದೆ.
PublicNext
02/04/2026 06:02 pm