ಮಂಗಳೂರು: ನನ್ನ ಮಗಳ ವಿಚಾರದಲ್ಲಿ ನ್ಯಾಯ ಕೊಡಿಸದಿದ್ದರೆ, ಪುತ್ತೂರು ಮಹಾಲಿಂಗೇಶ್ವರ ದೇವರ ಧ್ವಜಸ್ತಂಭದ ಮುಂದೆ ಕುಳಿತುಕೊಳ್ಳುತ್ತೇನೆ ಎಂದು ಸಂತ್ರಸ್ತೆ ತಾಯಿ ನಮಿತಾ ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು ಒಂದು ವರ್ಷ ಕಳೆದಿದೆ. ಆದ್ರೂ ಪಿ.ಜಿ.ಜಗನ್ನಿವಾಸ್ ರಾವ್ ಈಗ್ಲೂ ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ ಇಲ್ಲಿವರೆಗೂ ತನ್ನ ಮಗನಿಂದ ಓರ್ವ ಹೆಣ್ಣು ಮಗಳಿಗೆ ಆದ ಅನ್ಯಾಯದ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಹಿಂದೆ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆಗೆ ಮದುವೆ ಮಾಡಿಸುವುದಾಗಿ ಪಿ.ಜಿ.ಜಗನ್ನಿವಾಸ ರಾವ್ ಅವರು ಹೇಳಿದ್ದರು. ಮುಚ್ಚಳಿಕೆ ಪತ್ರ ಬರೆದುಕೊಟ್ಟಾಗ ಕೂಡ ಮದುವೆ ಮಾಡಿಸುವ ಜವಾಬ್ದಾರಿ ನನ್ನದು. ಮನೆಯಲ್ಲಿ ನನ್ನ ತೀರ್ಮಾನವೇ ಅಂತಿಮ ಎಂದು ಹೇಳಿದ್ದರು. ಸಂತ್ರಸ್ತೆಗೆ 9 ತಿಂಗಳು ಆಗುವವರೆಗೂ ಹಾಗೆಯೇ ಹೇಳಿ ನಮ್ಮ ದಾರಿ ತಪ್ಪಿಸುತ್ತಿದ್ದರು. ಆದ್ರೆ ಈಗ ಮಗುವಿಗೆ 10 ತಿಂಗಳು ಆಗ್ತಾ ಬಂದಿದೆ. ಆದ್ರೆ ಕೃಷ್ಣ ಹಾಗೂ ಸಂತ್ರಸ್ತೆಗೆ ಮದುವೆ ಮಾಡಲು ಪಿಜಿ ಜಗನ್ನಿವಾಸ ರಾವ್ ಅವರು ಮುಂದೆ ಬಂದಿಲ್ಲ.
ಇಷ್ಟೆಲ್ಲ ಆದ್ರೂ ನಾನು ಇಲ್ಲಿವರೆಗೂ ಅವರು ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡುವ ಕೆಲಸಕ್ಕೆ ಮಾತನಾಡಿಲ್ಲ. ಆದ್ರೆ ಇನ್ನು ಮುಂದೆ ಪಿ.ಜಿ.ಜಗನ್ನಿವಾಸ ರಾವ್ ಅವರನ್ನ ಧಾರ್ಮಿಕ ಕ್ಷೇತ್ರದ ಯಾವ ಚಟುವಟಿಕೆಗಳಲ್ಲೂ ಸೇರಿಸಿಕೊಳ್ಳಬೇಡಿ ಎಂದು ಕೇಳಿಕೊಳ್ಳುತ್ತೇನೆ. ತನ್ನ ಮಗನ ತಪ್ಪಿನ ಅರಿವಿದ್ದರೂ ಕೂಡ ದೇವರ ಕಾರ್ಯಗಳಲ್ಲಿ ಭಾಗಹಿಸುತ್ತಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ವಾದನ ವಾಸ್ತುಶಾಸ್ತ್ರ, ಚಾಕರಿ ಕೆಲಸಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಜಾತ್ರೋತ್ಸವದ ಗೊಣೆ ಮುಹೂರ್ತದ ಸಂದರ್ಭದಲ್ಲೂ ಮುಂಚೂಣಿಯಲ್ಲಿದ್ದರು. ಹಾಗಾಗಿ ನಾನು ಎಪ್ರಿಲ್ 10ರಂದು ಪುತ್ತೂರು ಜಾತ್ರೋತ್ಸವದ ಧ್ವಜಾರೋಹಣ ಆಗುವ ಸಂದರ್ಭದಲ್ಲಿ ಧ್ವಜಸ್ತಂಭದ ಮುಂದೆಯೇ ಕುಳಿತುಕೊಳ್ಳುತ್ತೇನೆ. ನ್ಯಾಯಕ್ಕಾಗಿ ತಂತ್ರಿಯವರಲ್ಲಿ ಕೇಳಿಕೊಳ್ಳುತ್ತೇನೆ. ಇನ್ನು ದೇವರಲ್ಲದೇ ಬೇರೆ ಯಾರೂ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಇಷ್ಟರವರೆಗೆ ಎಲ್ಲರ ಕೈಕಾಲು ಹಿಡಿದು ಮದುವೆ ಮಾಡಿಸಿಕೊಡಿ ಎಂದು ಕೇಳಿಕೊಂಡಾಗಿದೆ. ಆದ್ರೆ ಯಾರ ಮನಸ್ಸು ಕೂಡ ಕರಗಿಲ್ಲ. ಜಗನ್ನಿವಾಸ ರಾವ್ ಅವರು ಮದುವೆ ಮಾಡಿಸಿಕೊಡುತ್ತೇನೆ ಹೇಳಿ ಈಗ ಅವರೇ ತಪ್ಪು ಮಾಡಿದ ಮಗನನ್ನ ರಕ್ಷಿಸುತ್ತಿದ್ದಾರೆ. ಹಾಗಾಗಿ ಧಾರ್ಮಿಕ ಕ್ಷೇತ್ರದ ಯಾವ ಕೆಲಸಕ್ಕೂ ಜಗನ್ನಿವಾಸ ರಾವ್ ಅವರು ಮುಂದೆ ಹೋಗಬಾರದು. ಹೆಣ್ಣು ಮಗಳಿಗೆ ಮೊದಲು ನ್ಯಾಯ ಕೊಡಿಸಲಿ. ಅವರ ಮಗ ಮಾಡಿದ ತಪ್ಪಿಗೆ ದೇವಸ್ಥಾನದ ಧ್ವಜಸ್ತಂಭದ ಮುಂದೆ ಎಲ್ಲರಲ್ಲೂ ನ್ಯಾಯ ಕೊಡಿಸುವಂತೆ ಕೇಳುತ್ತೇನೆ ಎಂದು ಹೇಳಿದರು.
Kshetra Samachara
02/04/2026 08:49 pm