ಬೆಳ್ತಂಗಡಿ: ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ, ದೇವತಾರಾಧನೆಯಷ್ಟೇ ಸಿರಿ ಆರಾಧನೆಗೂ ಮಹತ್ವವಿದೆ. ಉತ್ಸವ ಮಾದರಿಯ ಆರಾಧನಾ ಹಾಗೂ ಆಚರಣಾ ರೂಪದ ಸಂಪ್ರದಾಯಗಳಲ್ಲಿ ಸಿರಿಜಾತ್ರೆ ಬಹಳ ಮಹತ್ವವಿದೆ. ಬೆಳ್ತಂಗಡಿ ತಾಲೂಕಿನ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆದ ಸಿರಿಜಾತ್ರೆಯ ಝಲಕ್ ಇಲ್ಲಿದೆ.
ದ.ಕ.ಜಿಲ್ಲೆಯಲ್ಲಿ ಕಬತ್ತಾರು, ನಂದಳಿಕೆ, ಹಿರಿಯಡ್ಕ, ಉರ್ಕಿತೋಟ, ಉರುಂಬಿದೊಟ್ಟುವಿನಂತೆ ನಿಡ್ಗಲ್ ಅಥವಾ ನಿಡ್ವಾಲ್ ಕ್ಷೇತ್ರವೂ ಪ್ರಮುಖ ಸಿರಿ ಆರಾಧನಾ ಕೇಂದ್ರವಾಗಿ ಗುರುತಿಸಿದೆ. ನಿಡ್ಗಲ್‌ನಲ್ಲಿ ವಾರ್ಷಿಕ ಸಿರಿಜಾತ್ರೆಯು ಪ್ರತೀ ವರ್ಷ ಮಾರ್ಚ್ ಅಥವಾ ಎಪ್ರಿಲ್ ತಿಂಗಳ ಹುಣ್ಣಿಮೆಯಂದು ನಡೆಯುತ್ತದೆ. ಅದರಂತೆ ಗುರುವಾರ ರಾತ್ರಿ ಇಲ್ಲಿ ನಡೆದ ಸಿರಿಜಾತ್ರೆಯ ಪ್ರಯುಕ್ತ ಸಿರಿ ಬಳಗಕ್ಕೆ ಸೇರಿದ ನೂರಾರು ಮಹಿಳೆಯರು ಸಿರಿ ಆವೇಶದಲ್ಲಿ ನಿರತರಾಗಿದ್ದರು. ಈ ಸಿರಿ ಬಳಗಕ್ಕೆ ಕುಮಾರ ಪಾತ್ರಿಗಳು ನಿರ್ದೇಶಿಸಿದರು.
ಸಿರಿಜಾತ್ರೆಯ ಪ್ರಮುಖ ಘಟ್ಟ ಸಿರಿಗಳ ದಲ್ಯ ಸೇವೆ. ಸಿರಿ ಬಳಗಕ್ಕೆ ಸೇರಿದ ಮಹಿಳೆಯರು, ಪುರುಷರು ಸಂಜೆಯಾಗುತ್ತಿದ್ದಂತೆ ನಿಡ್ಗಲ್ ಕ್ಷೇತ್ರದಲ್ಲಿ ಸೇರಿದ್ದರು. ರಾತ್ರಿಯಾಗುತ್ತಿದ್ದಂತೆ ಸ್ನಾನ ಮಾಡಿ ಮಹಿಳೆಯರು ಬಿಳಿಯ ಬಣ್ಣದ ಸೀರೆ ಉಟ್ಟು, ತುರುಬು ತುಂಬಾ ಮಲ್ಲಿಗೆ ಮುಡಿದು ದಲ್ಯ ಸೇವೆಗೆ ಅಣಿಯಾದರೆ, ಪುರುಷರು ಕೆಂಪುಬಣ್ಣದ ವಸ್ತ್ರವನ್ನು ಉಟ್ಟು ಆವೇಶ ಹೊಂದುವ ಕ್ರಿಯೆಗೆ ಸಿದ್ಧರಾದರು. ಬಳಿಕ ಹಿರಿಯ ಹಿರಿಯ ಅನುಭವಿ ಕುಮಾರ ಹಾಗೂ ಹಿರಿಯ ಅನುಭವಿ ಸಿರಿಯ ನಿರ್ದೇಶನದಂತೆ ಹೊಸದಾಗಿ ಸಿರಿ ಬಳಗಕ್ಕೆ ಸೇರಿಸುವವ ಕಾರ್ಯ ನೆರವೇರಿತು.
ದೇವರ ಬಲಿ ಉತ್ಸವ ಆದ ತಕ್ಷಣ ದಲ್ಯ ಸೇವೆ ನಡೆಯಿತು. ಸಿರಿ ಬಳಗಕ್ಕೆ ಸೇರಿದ ಮಹಿಳೆಯರು ತಾವು ತಂದಿದ್ದ ಬಿಳಿ ಮಡಿ ಬಟ್ಟೆಯನ್ನು ನೆಲಕ್ಕೆ ಹಾಸಿ ಕೈಯಲ್ಲಿ ಅಡಿಕೆಯ ಹೂ ಹಿಡಿದುಕೊಂಡು ದಲ್ಯ ಸೇವೆಗೆ ಸಾಲಾಗಿ ಆಯತಾಕಾರದಲ್ಲಿ ಅಥವಾ ಒಂದೇ ಸಾಲಿನಲ್ಲಿ ಸಾಲಾಗಿ ನಿಲ್ಲುತ್ತಾರೆ. ಹಿರಿಯ ಕುಮಾರ ಹಾಗೂ ಅನುಭವಿ ಸಿರಿಗಳ ಮಾರ್ಗದರ್ಶನದಲ್ಲಿ ಆವೇಶ ರಾತ್ರಿ ಪೂರ್ತಿ ನಡೆಯಿತು. ದಲ್ಯ ಸೇವೆಯಲ್ಲಿ ಸಿರಿ ಸಂಧಿಯೆಂಬ ಸುದೀರ್ಘವಾದ ಪಠ್ಯವುಳ್ಳ ಕಥನ ಗೀತೆಯ ಕೆಲವೊಂದು ಭಾಗವನ್ನು ಹಾಡುವ, ಪರಸ್ಪರ ಮಾತುಕತೆ ಆಡುವ, ಅಳುವ, ಮೈಯನ್ನು ತಿರುಗಿಸುವ ಕ್ರಿಯೆ ನಡೆಯಿತು. ಕೊನೆಗೆ ಅಬ್ಬಗ-ದಾರಗರ ಚೆನ್ನೆಮಣೆ ಆಟವನ್ನು ಮರುನಿರೂಪಿಸುವ ಕ್ರಿಯೆಯೂ ನಡೆಯಿತು. ಒಟ್ಟಿನಲ್ಲಿ ಸಾವಿರ ಮಂದಿ ಭಕ್ತರು ಸಿರಿಜಾತ್ರೆಯಲ್ಲಿ ಸೇರಿ ಭಕ್ತಿಯಿಂದ ನಡೆದುಕೊಂಡರು.
ವರದಿ: ವಿಶ್ವನಾಥ ಪಂಜಿಮೊಗರು
PublicNext
03/04/2026 01:04 pm