ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಕೇವಲ ಫೋನ್ ಮೂಲಕ ವೈದ್ಯರ ಸೂಚನೆಗಳನ್ನು ಕೇಳಿಸಿಕೊಳ್ಳುತ್ತಾ ತರಬೇತಿ ಇಲ್ಲದ ಸಿಬ್ಬಂದಿ ಹೆರಿಗೆ ಮಾಡಿಸಿದ ಪರಿಣಾಮ ನವಜಾತ ಶಿಶು ಮತ್ತು ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.
ಹೌದು ಬೆನಿಗಂಜ್ ನಿವಾಸಿ ಸುರೇಶ್ ಯಾದವ್ ಅವರು ತಮ್ಮ ಪತ್ನಿ ಸೋನಿ ಯಾದವ್ (32) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ನಗರದ 'ಮಾ ಪರಮೇಶ್ವರಿ ದೇವಿ ಮೆಮೋರಿಯಲ್' ಆಸ್ಪತ್ರೆಗೆ ದಾಖಲಿಸಿದ್ದರು. ಆರಂಭದಲ್ಲಿ, ಆಸ್ಪತ್ರೆಯ ವೈದ್ಯೆ ಅಂಜಲಿ ಶ್ರೀವಾಸ್ತವ ಅವರು ಸೋನಿ ಯಾದವ್ ಅವರ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದರು. ಆದರೆ, ಹೆರಿಗೆಯ ಸಮಯದಲ್ಲಿ ವೈದ್ಯರು ಸ್ಥಳದಲ್ಲಿ ಇರಲಿಲ್ಲ.
ಕುಟುಂಬದವರ ಆರೋಪದ ಪ್ರಕಾರ, ಆಸ್ಪತ್ರೆಯಲ್ಲಿ ತರಬೇತಿ ಇಲ್ಲದ ಸಿಬ್ಬಂದಿಯೊಬ್ಬರು ಫೋನ್‌ನಲ್ಲಿ ವೈದ್ಯರ ಸೂಚನೆಗಳನ್ನು ಕೇಳಿಸಿಕೊಳ್ಳುತ್ತಾ ಹೆರಿಗೆ ಮಾಡಿಸಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ, ಮಗು ಉಸಿರಾಡುತ್ತಿಲ್ಲ ಎಂದು ಹೇಳಿ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಕೂಡಲೇ ಮಗುವನ್ನು ಬೇರೆ ವೈದ್ಯರ ಬಳಿ ಕರೆದೊಯ್ದಾಗ, ಮಗು ಮೃತಪಟ್ಟಿರುವುದು ದೃಢಪಟ್ಟಿದೆ. ಇತ್ತ, ಸೋನಿ ಯಾದವ್ ಅವರ ಸ್ಥಿತಿಯೂ ಗಂಭೀರವಾಗಿ, ಚಿಕಿತ್ಸೆ ಫಲಿಸದೆ ಅವರೂ ಮೃತಪಟ್ಟಿದ್ದಾರೆ.
ಘಟನೆ ಕುರಿತು ದೂರು ದಾಖಲಾಗುತ್ತಿದ್ದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ದಾಳಿ ನಡೆಸಿದ್ದಾರೆ. ತನಿಖೆಯ ವೇಳೆ, ಆ ಆಸ್ಪತ್ರೆಯಲ್ಲಿ ಯಾವುದೇ ಅರ್ಹ ವೈದ್ಯರು ಅಥವಾ ನರ್ಸ್‌ಗಳು ಪತ್ತೆಯಾಗಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಮಹೇಶ್ ಸಿಂಗ್ ಎಂಬ ವ್ಯಕ್ತಿ, ತಾನೇ ಮ್ಯಾನೇಜರ್ ಎಂದು ಹೇಳಿಕೊಂಡು ಇಡೀ ಆಸ್ಪತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದ. ಅಷ್ಟೇ ಅಲ್ಲದೆ, ಸಿಸೇರಿಯನ್ ಆದ ಮೂವರು ಮಹಿಳೆಯರನ್ನು ಸಹ ಅದೇ ಮ್ಯಾನೇಜರ್ ಉಸ್ತುವಾರಿಯಲ್ಲಿ ಬಿಡಲಾಗಿತ್ತು.
ಆಸ್ಪತ್ರೆಯ ದಾಖಲೆಗಳು ಅಪೂರ್ಣವಾಗಿದ್ದವು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿಯೂ ಅಸಮರ್ಪಕವಾಗಿತ್ತು. ಸದ್ಯ, ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ವೈದ್ಯೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಸುರೇಶ್ ಯಾದವ್ ಅವರ ಮೊದಲ ಮಗುವನ್ನು ನೋಡುವ ಕನಸು, ಆಸ್ಪತ್ರೆಯ ಈ ಘೋರ ನಿರ್ಲಕ್ಷ್ಯದಿಂದ ನುಚ್ಚುನೂರಾಗಿದೆ.
PublicNext
03/04/2026 03:41 pm