ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ ಇರಾನ್ ನೌಕಾಪಡೆಯ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ (Behnam Rezaei) ಹತ್ಯೆಯಾಗಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢಪಡಿಸಿದೆ.
ಬೆಹ್ನಾಮ್ ರೆಝಾಯ್ ಇರಾನ್‌ನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಮುದ್ರ ಬೆದರಿಕೆಗಳ ಮೇಲ್ವಿಚಾರಣೆ, ಪ್ರಾದೇಶಿಕ ಸಮುದ್ರದಾದ್ಯಂತ ಕಾರ್ಯತಂತ್ರದ ಮಾಹಿತಿ ಸಂಗ್ರಹಣೆ ಹಾಗೂ ಗುಪ್ತಚರ ಕಾರ್ಯಾಚರಣೆಗಳನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದರು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಹತ್ಯೆ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಯುದ್ಧದಲ್ಲಿ ಇಲ್ಲಿಯವರೆಗೆ ಇರಾನ್‌ನಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ 1,340 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್, ಜೋರ್ಡಾನ್, ಇರಾಕ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಹಲವು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಈ ನಿರಂತರ ದಾಳಿಗಳಿಂದಾಗಿ ಸಾವುನೋವುಗಳು, ವ್ಯಾಪಕ ಮೂಲಸೌಕರ್ಯ ಹಾನಿ ಉಂಟಾಗಿದ್ದು, ಜಾಗತಿಕ ಮಾರುಕಟ್ಟೆಗಳು ಹಾಗೂ ವಿಮಾನಯಾನ ಕ್ಷೇತ್ರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ.
PublicNext
03/04/2026 08:25 pm