ಮುಲ್ಕಿ : ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿಯಿಂದ ಕೆಂಚನಕೆರೆ, ಕೆರೆಕಾಡುವರೆಗೆ ಅಲ್ಲಲ್ಲಿ ತ್ಯಾಜ್ಯದ ರಾಶಿ ಕಾಣಸಿಗುತ್ತಿದ್ದು ರೋಗದ ಭೀತಿ ಎದುರಾಗಿದೆ. ಸಿಸಿ ಕ್ಯಾಮೆರಾ ನಾಪತ್ತೆ
ಕಳೆದ ವರ್ಷಗಳ ಹಿಂದೆ ಕಿಲ್ಪಾಡಿ ಪಂಚಾಯತ್ ಅಧಿಕಾರದಲ್ಲಿರುವಾಗ ಅಧ್ಯಕ್ಷರಾಗಿದ್ದ ವಿಕಾಸ್ ಶೆಟ್ಟಿ ನೇತೃತ್ವದಲ್ಲಿ ತ್ಯಾಜ್ಯ ಬಿಸಾಡುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು 3-4 ಕಡೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
ಆದರೆ ಇದೀಗ ಸಿಸಿ ಕ್ಯಾಮೆರಾ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಕೆಲವೆಡೆ ಸಿಸಿ ಕ್ಯಾಮೆರಾ ಕಳ್ಳರ ಪಾಲಾಗಿದೆ ಎಂಬ ಅನುಮಾನ ಮೂಡಿದೆ. ಸಿಸಿ ಕ್ಯಾಮೆರಾ ಇಲ್ಲದಿರುವುದು ದುಷ್ಕರ್ಮಿಗಳಿಗೆ ವರದಾನವಾಗಿ ಪರಿಣಮಿಸಿದೆ.
ಕುಬೆವೂರು ಪರಿಸರದಲ್ಲಿ ದುಷ್ಕರ್ಮಿಗಳು ಲೋಡುಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಗೋಣಿಯಲ್ಲಿ ರಾಜಾರೋಷವಾಗಿ ಬಿಸಾಡಿ ಪರಾರಿಯಾಗುತ್ತಿದ್ದಾರೆ. ಕಿಲ್ಪಾಡಿ ಪಂಚಾಯಿತಿಯಲ್ಲಿ ಈಗ ಅಧಿಕಾರಿಗಳ ಆಡಳಿತವಾಗಿದ್ದು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.
ಸ್ಥಳೀಯ ಮಾಜಿ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಹೆದ್ದಾರಿ ಬದಿಯಲ್ಲಿ ತ್ಯಾಜ್ಯದ ರಾಶಿ ಮಿತಿಮೀರುತ್ತಿದೆ.
ರಸ್ತೆ ಧೂಳು ಮಯ!!
ಕುಬೆವೂರು ಪರಿಸರದಲ್ಲಿ ಒಂದೆಡೆ ತ್ಯಾಜ್ಯದ ರಾಶಿ ಕಾಣಸಿಗುತ್ತಿದ್ದರೆ ಇನ್ನೊಂದೆಡೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯ ಪುಕ್ಕಟೆ ಧೂಳು ಗ್ರಾಮಸ್ಥರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ. ಕಿನ್ನಿಗೋಳಿ ಪಟ್ಟಣ ಹಾಗೂ ಹಾಗೂ ಮುಲ್ಕಿ ನಗರ ಪಂಚಾಯಿತಿಗೆ ನೀರುಣಿಸುವ ಪೈಪ್ ಲೈನ್ ಯೋಜನೆ ಕಿಲ್ಪಾಡಿ ಗ್ರಾಮಸ್ಥರಿಗೆ ಕಂಟಕವಾಗಿ ಪರಿಣಮಿಸಿದ್ದು ಗ್ರಾಮಸ್ಥರು ನಿದ್ರೆಯಿಲ್ಲದ ರಾತ್ರಿಗಳನ್ನು ಎಣಿಸುವಂತಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತು ತ್ಯಾಜ್ಯ ಬಿಸಾಡುತ್ತಿರುವವರನ್ನು ಹಾಗೂ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
PublicNext
03/04/2026 08:48 pm