ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KEA ಪ್ರಸನ್ನ ವರ್ಗಾವಣೆ: ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಎಚ್. ಪ್ರಸನ್ನ ಅವರ ಹುದ್ದೆ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. KEA ದಲ್ಲಿ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿದ್ದ ಎಚ್. ಪ್ರಸನ್ನ ಅವರ ವರ್ಗಾವಣೆಗೆ ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೌದು ರಾಜ್ಯ ಸರ್ಕಾರ ಏಪ್ರಿಲ್ 2 ರಂದು ಹೊರಡಿಸಿದ ಆದೇಶದ ಪ್ರಕಾರ, ತಾಂತ್ರಿಕ ಶಿಕ್ಷಣ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಎಚ್. ಪ್ರಸನ್ನ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ತಾಂತ್ರಿಕ ಶಿಕ್ಷಣ ಇಲಾಖೆಯ ಜೊತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಆದರೆ, ಈಗ ಅವರನ್ನು KEA ಗೆ ಹೆಚ್ಚುವರಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಾತ್ರ ನೇಮಿಸಲಾಗಿದೆ. ಈ ಬದಲಾವಣೆಯಿಂದಾಗಿ, ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಶಿವಾನಂದ ಕಪಾಶಿ ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸ್ತುತ ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳು, ನಿಗಮ ಮಂಡಳಿಗಳ ನೇಮಕಾತಿ ಮತ್ತು ಅರ್ಹತಾ ಪರೀಕ್ಷೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಎಚ್. ಪ್ರಸನ್ನ ಅವರು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಮತ್ತು ಪಾರದರ್ಶಕತೆಯನ್ನು ತಂದಿದ್ದರು. ಇದೇ ಕಾರಣಕ್ಕೆ ಅವರ ವರ್ಗಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯಾದ 'ಅಕ್ಸಾ ಆಫೀಸಿಯಲ್' ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ತಮ್ಮ ಟ್ವೀಟ್‌ನಲ್ಲಿ, "ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಬೇಡ. KEA ನಿರ್ದೇಶಕರಾದ ಪ್ರಸನ್ನ ಸರ್ ಅವರು ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಪ್ರಸನ್ನ ಸರ್ ಅವರು KEA ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಬೇಕು, ಸರ್ಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದು" ಎಂದು ಒತ್ತಾಯಿಸಿದೆ.

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತಕುಮಾರ್ ಆರ್ ಕೂಡ ಈ ವರ್ಗಾವಣೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. "ನಾವು ಚಾಪೆ ಕೆಳಗಡೆ ನುಗ್ಗಿದರೆ, ಸರ್ಕಾರ ರಂಗೋಲಿ ಕೆಳಗಡೆ ನುಗ್ಗುತ್ತದೆ" ಎಂಬ ಮಾತಿಗೆ ಪ್ರಸ್ತುತ ಬೆಳವಣಿಗೆಗಳೇ ಸಾಕ್ಷಿ.

KEA ನಲ್ಲಿ ನಿಷ್ಠಾವಂತ, ದಕ್ಷ ಹಾಗೂ ಕಟ್ಟುನಿಟ್ಟಿನ ಅಧಿಕಾರಿಯಾಗಿ ಪ್ರಸನ್ನ ಸರ್ ಕಾರ್ಯನಿರ್ವಹಿಸಿದ್ದಾರೆ. ಅವರ ಆಗಮನದ ನಂತರ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಗಳಾಗಿ, ಅಕ್ರಮಗಳು ಮತ್ತು ದಲ್ಲಾಳಿಗಳ ಹಾವಳಿ ನಿಂತಿದೆ. ಹಗಲಿರುಳು ಓದುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ 'ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ' ಎಂಬ ಆಶಾಭಾವನೆ ಮತ್ತೆ ಚಿಗುರೊಡೆದಿತ್ತು. ಕಳೆಗುಂದಿದ್ದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತಿದ್ದ ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಲು ಸಿದ್ಧತೆ ನಡೆಸಿರುವುದು ನಿಜಕ್ಕೂ ವಿಪರ್ಯಾಸ.

ಭ್ರಷ್ಟಾಚಾರದ ಕೂಪವಾಗಿರುವ ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ, ವ್ಯವಸ್ಥೆಯನ್ನು ಸರಿಪಡಿಸಲು ಹೋದರೆ ವರ್ಗಾವಣೆ ಗ್ಯಾರಂಟಿ ಎಂಬುದನ್ನು ಸರ್ಕಾರ ತನ್ನ ಈ ನಡೆಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿದೆ ಎಂದು ಕಾಂತಕುಮಾರ್ ಆರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

04/04/2026 09:31 am

Cinque Terre

14.72 K

Cinque Terre

0

ಸಂಬಂಧಿತ ಸುದ್ದಿ