ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಈಗ ಮತ್ತೊಂದು ಹೈವೋಲ್ಟೇಜ್ ಚುನಾವಣೆಯ ಕಾವು ಶುರುವಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ 12 ಸದಸ್ಯರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ತೆರವಾಗಲಿರುವ ಈ ಸ್ಥಾನಗಳ ಮೇಲೆ ರಾಜ್ಯದ ಘಟಾನುಘಟಿ ನಾಯಕರ ಕಣ್ಣು ಬಿದ್ದಿದೆ. ಹಾಗಾದ್ರೆ ನಿವೃತ್ತಿಯಾಗುತ್ತಿರುವ ಆ 12 ಮಂದಿ ಯಾರು? ಯಾವ ಪಕ್ಷಕ್ಕೆ ಎಷ್ಟು ಲಾಭ? ಈ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಕರ್ನಾಟಕ ವಿಧಾನ ಪರಿಷತ್ತಿನ 12 ಸದಸ್ಯರು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಇದರಲ್ಲಿ ರಾಜಕೀಯದ ಅನುಭವಿ ನಾಯಕರು, ಮಾಜಿ ಸಚಿವರು ಹಾಗೂ ನಾಮನಿರ್ದೇಶಿತ ಸದಸ್ಯರ ದಂಡೇ ಇದೆ. ಸದ್ಯದ ಮಾಹಿತಿ ಪ್ರಕಾರ, ಈ ಸ್ಥಾನಗಳಿಗಾಗಿ ರಾಜಕೀಯ ವಲಯದಲ್ಲಿ ಭಾರಿ ಲಾಬಿ ಮತ್ತು ಸಂಚಲನ ಈಗಲೇ ಆರಂಭವಾಗಿದೆ.
ಈ ಪಟ್ಟಿಯಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಪ್ರಮುಖ ಪಕ್ಷಗಳ ಬಲಾಬಲ ಹೀಗಿದೆ:
• ಕಾಂಗ್ರೆಸ್‌ನಿಂದ: ಬಿ.ಕೆ. ಹರಿಪ್ರಸಾದ್, ನಜೀರ್ ಅಹ್ಮದ್, ತಿಪ್ಪಣ್ಣಪ್ಪ ಕಮಕನೂರ.
• ಬಿಜೆಪಿಯಿಂದ: ಮಾಜಿ ಸಚಿವ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್.
• ಜೆಡಿಎಸ್‌ನಿಂದ: ಕೆ.ಎ. ತಿಪ್ಪೇಸ್ವಾಮಿ.
• ನಾಮನಿರ್ದೇಶಿತ ಸದಸ್ಯರು: ಭಾರತಿ ಶೆಟ್ಟಿ, ಶಾಂತಾರಾಮ್ ಬುಡ್ನ ಸಿದ್ಧಿ, ಡಾ. ತಳವಾರ್ ಸಾಬಣ್ಣ, ಅಡಗೂರು ಎಚ್. ವಿಶ್ವನಾಥ್ ಮತ್ತು ರಮೇಶ್ ಬಾಬು.
ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗುವ 7 ಸ್ಥಾನಗಳಲ್ಲಿ ಗೆಲ್ಲಲು ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದೆ. ಸದ್ಯದ ಶಾಸಕರ ಬಲದ ಮೇಲೆ ಕಾಂಗ್ರೆಸ್ ಆರಾಮವಾಗಿ 4 ಸ್ಥಾನಗಳನ್ನು ಗೆಲ್ಲಬಹುದು. ಇನ್ನುಳಿದ ಸ್ಥಾನಗಳಿಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಮೈತ್ರಿ ಲೆಕ್ಕಾಚಾರದ ಮೇಲೆ ಈ ಸ್ಥಾನಗಳು ನಿರ್ಧಾರವಾಗಲಿವೆ.
5 ಮಂದಿ ನಾಮನಿರ್ದೇಶಿತ ಸದಸ್ಯರು ನಿವೃತ್ತಿಯಾಗುತ್ತಿರುವುದು ಆಡಳಿತಾರೂಢ ಕಾಂಗ್ರೆಸ್‌ಗೆ ವರದಾನವಾಗಲಿದೆ. ಸಾಹಿತ್ಯ, ಕಲೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನು ಸರ್ಕಾರ ನೇರವಾಗಿ ಪರಿಷತ್‌ಗೆ ಕಳುಹಿಸಬಹುದಾಗಿದ್ದು, ಇಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ, ಬಿ.ಕೆ. ಹರಿಪ್ರಸಾದ್ ಅವರಂತಹ ಹಿರಿಯ ನಾಯಕರ ಅವಧಿ ಮುಗಿಯುತ್ತಿರುವುದು ಒಂದು ಕಡೆಯಾದರೆ, ಹೊಸ ಮುಖಗಳಿಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಮತ್ತೊಂದು ಕಡೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
PublicNext
04/04/2026 12:06 pm