ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Fresh Opinion Poll : ಬಂಗಾಳದಲ್ಲಿ ದೀದಿಗೆ ನೆಲೆ ಕಳೆದುಕೊಳ್ಳುವ ಭೀತಿ, ಬಿಜೆಪಿ ವೋಟ್’ಶೇರ್ ಗಣನೀಯ ಏರಿಕೆ

ಕೋಲ್ಕತ್ತ: ಕಳೆದ ಕೆಲವು ವರ್ಷಗಳಿಂದ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ಒಂದಲ್ಲಾ ಒಂದು ವಿಷಯಕ್ಕೆ ತಿಕ್ಕಾಟ ನಡೆಯುತ್ತಲೇ ಇದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಈ ಬೆಳವಣಿಗೆಗಳು ಇನ್ನಷ್ಟು ತೀವ್ರಗೊಂಡಿವೆ. ಇದೀಗ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಂಗಾಳದಲ್ಲಿ ಹೊಸ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ.

ಸಮೀಕ್ಷೆ ಫಲಿತಾಂಶ: ಅಧಿಕಾರ ಉಳಿಸಿಕೊಳ್ಳಲಿದೆ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

ಹೊಸದಾಗಿ ಪ್ರಕಟವಾಗಿರುವ ಒಪಿನಿಯನ್ ಪೋಲ್ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸತತ ನಾಲ್ಕನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ, ಆದರೆ ಬಿಜೆಪಿ ತನ್ನ ಜನಪ್ರಿಯತೆ ಮತ್ತು ಮತಬ್ಯಾಂಕ್ ಅನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ತೃಣಮೂಲ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೂ, ಹಲವು ಕ್ಷೇತ್ರಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ವಿವಾದ

SIR ಪ್ರಕ್ರಿಯೆಯಲ್ಲಿ ಇದುವರೆಗೆ ಸುಮಾರು 61 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವೇ ನೇರವಾಗಿ ಮಧ್ಯಪ್ರವೇಶಿಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಈ ಪ್ರಕ್ರಿಯೆಗಳು ಮುಂದುವರಿಯುತ್ತಿವೆ.

ಇದರ ನಡುವೆಯೇ, ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಮಾಲ್ಡಾದಲ್ಲಿ ಏಳು ನ್ಯಾಯಾಧೀಶರನ್ನೇ ಕೂಡಿಹಾಕಿದ ಆಘಾತಕಾರಿ ಪ್ರಕರಣ ನಡೆದಿತ್ತು.

ಇಡೀ ದೇಶವೇ ತಲೆತಗ್ಗಿಸುವಂತಹ ಈ ಘಟನೆಯ ಪ್ರಮುಖ ಆರೋಪಿ, ಸ್ಥಳೀಯ ಎಐಎಂಐಎಂ ಪಕ್ಷದ ನಾಯಕ ಮೊಫಕ್ಕುರಲ್ ಇಸ್ಲಾಂನನ್ನು ಭದ್ರತಾ ಪಡೆಗಳು ಬಾಗ್ದೊರ್ಗಾ ವಿಮಾನ ನಿಲ್ದಾಣದಿಂದ ಎಳೆದು ತಂದು ಬಂಧಿಸಿದ್ದವು. ಈತ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.

ಪಕ್ಷಗಳ ಸೀಟು ಹಂಚಿಕೆ ಅಂದಾಜು

ವೋಟ್‌ವೈಬ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 174 ರಿಂದ 184 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ ಸರಳ ಬಹುಮತಕ್ಕೆ 148 ಸ್ಥಾನಗಳು ಬೇಕು. ಈ ಫಲಿತಾಂಶ ನಿಜವಾದರೆ, ತೃಣಮೂಲ ಕಾಂಗ್ರೆಸ್ ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೇರಲಿದೆ. ಆದರೆ, ಬಿಜೆಪಿಯ ಹೆಚ್ಚುತ್ತಿರುವ ಜನಪ್ರಿಯತೆ ದೀದಿಗೆ ದೊಡ್ಡ ಸವಾಲಾಗಲಿದೆ.

ಬಿಜೆಪಿಯ ಏರಿಕೆ ಮತ್ತು ಕಾಂಗ್ರೆಸ್‌ನ ಕುಸಿತ

ಸಮೀಕ್ಷೆಯಲ್ಲಿ ಪ್ರಮುಖ ಅಂಶವೆಂದರೆ, ಬಿಜೆಪಿ ತನ್ನ ಮತಬ್ಯಾಂಕ್ ಅನ್ನು ಗಣನೀಯವಾಗಿ ವೃದ್ಧಿಸಿಕೊಳ್ಳಲಿದೆ ಎಂಬುದು. ಬಿಜೆಪಿಯು 108 ರಿಂದ 118 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಳೆದ ತಿಂಗಳು ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ 98 ರಿಂದ 108 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು.

ಇದು ಬಿಜೆಪಿಯ ಹೆಚ್ಚುತ್ತಿರುವ ಜನಪ್ರಿಯತೆಯ ಸಂಕೇತವಾಗಿದೆ. ಚುನಾವಣೆಗೆ ಇನ್ನೂ ಮೂರು ವಾರಗಳಿದ್ದು, ಈ ಫಲಿತಾಂಶದಲ್ಲಿ ವ್ಯತ್ಯಾಸವೂ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮಾಲ್ಡಾದಂತಹ ಘಟನೆಗಳು ಟಿಎಂಸಿಗೆ ಹಿನ್ನಡೆ ತರುವ ಸಾಧ್ಯತೆಯಿದೆ.

ಇನ್ನು, ಒಂದು ಕಾಲದಲ್ಲಿ ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಕೇವಲ 0 ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದು ಸಮೀಕ್ಷೆ ಉಲ್ಲೇಖಿಸಿದೆ. 2021ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 215 ಸ್ಥಾನಗಳಲ್ಲಿ ಮತ್ತು ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪ್ರಾದೇಶಿಕವಾಗಿ ನೋಡಿದರೆ, ಮಿಡ್ನಾಪುರದಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕರೆ, ಮಾಲ್ಡಾ ಮತ್ತು ಪ್ರೆಸಿಡೆನ್ಸಿ ಭಾಗದಲ್ಲಿ ಟಿಎಂಸಿಗೆ ಮುನ್ನಡೆ ದಕ್ಕಬಹುದು.

ಮುಖ್ಯಮಂತ್ರಿ ಆಯ್ಕೆ ಮತ್ತು ಮತದಾರರ ಒಲವು

ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಗೆ, ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ. 46.4ರಷ್ಟು ಜನ ಮಮತಾ ಬ್ಯಾನರ್ಜಿ ಎಂದು ಅಭಿಪ್ರಾಯಪಟ್ಟರೆ, ಶೇ. 34.9ರಷ್ಟು ಜನ ಸುವೇಂದು ಅಧಿಕಾರಿ ಉತ್ತಮ ಎಂದಿದ್ದಾರೆ. ಅಲ್ಪಸಂಖ್ಯಾತ ಮತದಾರರು ಟಿಎಂಸಿಗೆ ಒಲವು ತೋರಿದ್ದರೆ, ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರ ಹಿಂದೂ ಮತದಾರರು ಬಿಜೆಪಿ ಸೂಕ್ತ ಎಂದು ಹೇಳಿದ್ದಾರೆ.

Edited By : Abhishek Kamoji
PublicNext

PublicNext

04/04/2026 02:36 pm

Cinque Terre

4.56 K

Cinque Terre

4

ಸಂಬಂಧಿತ ಸುದ್ದಿ