ಬೆಂಗಳೂರು: ಜೆ.ಸಿ.ನಗರದಲ್ಲಿ ಯುವಕನೊಬ್ಬನ ಬರ್ಬರ ಹತ್ಯೆ ನಡೆದಿದೆ. 22 ವರ್ಷದ ವಿಜಯ್ ಎಂಬಾತನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ವಿಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿತ್ತು.
ಆದ್ರೆ ವಿಜಯ್ ಕೊಲೆ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಮದುವೆಯಾದ ಯುವತಿಗೆ ಕಿರುಕುಳ ನೀಡುತ್ತಿದ್ದದ್ದೇ ವಿಜಯ್ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಕೊಲೆಯಾದ ವಿಜಯ್, ಯುವತಿಯೊಬ್ಬಳಿಗೆ ಫೋನ್ ಮತ್ತು ಮೆಸೇಜ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ನಂತೆ. ಇದೇ ವಿಚಾರವನ್ನು ಮಾತನಾಡಲು ಆರೋಪಿಗಳಾದ ಕಿರಣ್ ಹಾಗೂ ವಿನೋದ್, ವಿಜಯ್‌ನನ್ನು ಜೆ.ಸಿ. ನಗರದ ಜ್ಯೋತಿ ಬಾರ್ ಬಳಿ ಕರೆಸಿದ್ದಾರೆ.
ನಿನ್ನೆ ರಾತ್ರಿ ಆರೋಪಿ ವಿನೋದ್‌ನ ಬೈಕ್ ವಿಜಯ್‌ನ ಬೈಕ್‌ಗೆ ತಾಗಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಇದರ ಬೆನ್ನಲ್ಲೇ, ಇಂದು ಬೆಳಗ್ಗೆ ಕಿರಣ್ ಮತ್ತು ವಿನೋದ್ ಸಹೋದರರು ವಿಜಯ್‌ನನ್ನು ಹುಡುಕಿಕೊಂಡು ಮನೆ ಬಳಿ ಹೋಗಿದ್ದರಾದರೂ, ಅವನು ಸಿಕ್ಕಿರಲಿಲ್ಲ.
ನಂತರ ಜ್ಯೋತಿ ಬಾರ್ ಬಳಿ ವಿಜಯ್‌ನನ್ನು ಕರೆಸಿ, ಯುವತಿಗೆ ಕಿರುಕುಳ ನೀಡುತ್ತಿದ್ದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆರೋಪಿಗಳು ಹಾಗೂ ವಿಜಯ್ ನಡುವೆ ಗಲಾಟೆ ತಾರಕಕ್ಕೇರಿದೆ.
ಜ್ಯೋತಿ ಬಾರ್ ಬಳಿಯಿಂದಲೇ ವಿಜಯ್‌ನನ್ನು ಅಟ್ಟಾಡಿಸಿಕೊಂಡು ಬಂದ ಆರೋಪಿಗಳು, ಜೆ.ಸಿ. ನಗರದ ಮುಖ್ಯರಸ್ತೆಯ ಪಕ್ಕದ ಮುನಿರೆಡ್ಡಿ ಪಾಳ್ಯದ ಸ್ಟ್ರೀಟ್ ರೋಡ್‌ಗೆ ಬಂದಿದ್ದಾರೆ.
ಆರೋಪಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವಿಜಯ್, ನೆಲಕ್ಕೆ ಬಿದ್ದಾಗ, ಆತನ ಹೊಟ್ಟೆಗೆ ಮನಸೋಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜೆ.ಸಿ. ನಗರ ಪೊಲೀಸರು ತನಿಖೆ ನಡೆಸಿ, ಆರೋಪಿಗಳಾದ ಕಿರಣ್ ಮತ್ತು ವಿನೋದ್‌ನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಜೆ.ಸಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
PublicNext
04/04/2026 04:44 pm