ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಎಲ್‌ನಿಂದ ಡೇವಿಡ್ ವಾರ್ನರ್ ತಾತ್ಕಾಲಿಕ ವಿರಾಮ : ಜಗಳದ ವಿಡಿಯೋ ಬಗ್ಗೆ ಸ್ಪಷ್ಟನೆ

ಐಪಿಎಲ್‌ನಲ್ಲಿ ವರ್ಷಗಳ ಕಾಲ ಅಬ್ಬರಿಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) ಇದೀಗ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಬದಲಿಗೆ, ಅವರು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (PSL) ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಲೀಗ್‌ನಲ್ಲಿ ಇದುವರೆಗೆ ಹತ್ತು ಪಂದ್ಯಗಳು ನಡೆದಿದ್ದು, ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ, ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್ ಲೀಗ್ ತೊರೆದು ತವರಿಗೆ ಮರಳಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು.

ವಾಸ್ತವವಾಗಿ, ಡೇವಿಡ್ ವಾರ್ನರ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ವಾರ್ನರ್ ತವರಿಗೆ ಮರಳಿರುವುದಕ್ಕೂ, ವೈರಲ್ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯ ಏಪ್ರಿಲ್ 9 ರಂದು ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೇಶಾವರ್ ಝಲ್ಮಿ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಇನ್ನೂ 6 ದಿನಗಳ ವಿರಾಮವಿದ್ದ ಕಾರಣ, ಡೇವಿಡ್ ವಾರ್ನರ್ ಈ ಅವಕಾಶವನ್ನು ಬಳಸಿಕೊಂಡು ಸಣ್ಣ ರಜೆ ತೆಗೆದುಕೊಂಡು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಅವರು ತಂಡದ ಮುಂದಿನ ಪಂದ್ಯಕ್ಕೂ ಮೊದಲು ಪಾಕಿಸ್ತಾನಕ್ಕೆ ಮರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಕರಾಚಿ ಕಿಂಗ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟ್ಸ್‌ಮನ್ ಆಗಿಯೂ ವಾರ್ನರ್ ಮಿಂಚಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ 31.00 ಸರಾಸರಿಯಲ್ಲಿ 93 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.

ಇನ್ನು ಪಾಕಿಸ್ತಾನ ಸೂಪರ್ ಲೀಗ್ ಸಮಯದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ, ವಾರ್ನರ್ ಮೊಯಿನ್ ಅಲಿ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತ್ತು. ಕರಾಚಿ ಕಿಂಗ್ಸ್ ತಂಡದ ನಿರ್ದೇಶಕ ಹೈದರ್ ಅಜರ್ ಕೂಡ ವಾರ್ನರ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿತ್ತು. ಹೀಗಾಗಿ, ವಾರ್ನರ್ ಮತ್ತು ಅಲಿ ಜಗಳವಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಆದಾಗ್ಯೂ, ಡೇವಿಡ್ ವಾರ್ನರ್ ಈ ವದಂತಿಯನ್ನು ನಿರಾಕರಿಸಿದ್ದಾರೆ. ಕರಾಚಿ ತಂಡದೊಳಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ಅದು ಕೇವಲ ತಮಾಷೆಯ ವಾದವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

04/04/2026 10:06 am

Cinque Terre

60.92 K

Cinque Terre

0