ಬೆಂಗಳೂರು: ನೆಲಮಂಗಲದಲ್ಲಿ ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿಯರಿಗೆ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸುದ್ದಿ ಪ್ರಸಾರ ಹಿನ್ನೆಲೆ FSSI ಅಧಿಕಾರಿಗಳು ಘಟನಾಸ್ಥಳಕ್ಕೆ ಭೇಟಿ ನೀಡಿದರು.
ರಿಯಾಲಿಟಿ ಚೆಕ್ ಕುರಿತು ತಹಶೀಲ್ದಾರ್ ಮಲ್ಲೇಶ್ ಅವರಿಗೆ ಮಾಹಿತಿ ನೀಡಲಾಗಿತ್ತು. ಫುಡ್ ಸೇಫ್ಟಿ ಆಫೀಸರ್ ನಾಗೇಶ್ ಹಾಗೂ ಎಸಿಡಿಪಿಓ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಪರಿಶೀಲನೆ ವೇಳೆ ಹುಳು ಹಾಗೂ ಕಸದೊಂದಿಗೆ ಮಿಶ್ರಿತ ಅಕ್ಕಿಯ ಮೂಟೆಗಳು ಪತ್ತೆಯಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದರು. ಈ ಪದಾರ್ಥಗಳನ್ನು ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ವಿತರಿಸಲಾಗುತ್ತಿತ್ತು ಎಂಬುದು ಆತಂಕಕ್ಕೆ ಕಾರಣವಾಗಿದೆ.
ಟೆಂಡರ್ ಪಡೆದು ಉತ್ಪಾದನಾ ಘಟಕಕ್ಕೆ ಪದಾರ್ಥಗಳನ್ನು ಪೂರೈಸುತ್ತಿರುವ ವಸುಧಾ ಎಂಟರ್ಪ್ರೈಸಸ್ ಸಂಸ್ಥೆಯ ವಿರುದ್ಧ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಗುಣಮಟ್ಟ ಪರೀಕ್ಷೆ ಮಾಡದೇ ಆಹಾರ ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಟೆಂಡರ್ ಪಡೆದ ಏಜೆನ್ಸಿ, “ಈ ರೀತಿಯಲ್ಲಿ ಮುಂದುವರಿದರೆ ವ್ಯವಹಾರ ನಡೆಸುವುದು ಕಷ್ಟ” ಎಂದು ಸಬೂಬು ಹೇಳಿ ಕರೆ ಕಟ್ ಮಾಡಿದ್ದಾರೆ.
ಘಟಕದ ನಿರ್ವಾಹಕರಿಗೆ ಫುಡ್ ಸೇಫ್ಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದು, ಅಕ್ಕಿ, ಬೇಳೆ ಸೇರಿದಂತೆ ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮಗಳಿಗಾಗಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
PublicNext
05/04/2026 12:38 pm