ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭಕ್ತಿ, ಸಡಗರದ ‘ಈಸ್ಟರ್’ ಹಬ್ಬ ಆಚರಣೆ

ಮಂಗಳೂರು: ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂದೇಶ ಸಾರುವ ಕ್ರೈಸ್ತರ ಪವಿತ್ರ ಹಬ್ಬ ‘ಈಸ್ಟರ್’ ಅನ್ನು ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು. ಶನಿವಾರ ರಾತ್ರಿ ಈಸ್ಟರ್ ಜಾಗರಣೆಯ ವಿಶೇಷ ಬಲಿಪೂಜೆಗಳು ನಡೆದವು.

ಸಂಜೆ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಜಾಗರಣೆಯ ಬಲಿಪೂಜೆಗಳು ಆರಂಭಗೊಂಡವು. ಜಗತ್ತಿಗೆ ಬೆಳಕಾದ ಕ್ರಿಸ್ತರ ಸಂಕೇತವಾಗಿ 'ಹೊಸ ಅಗ್ನಿ'ಯನ್ನು ಆಶೀರ್ವಚನ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಂಕಿ ಆಶೀರ್ವಚನ, ಪವಿತ್ರ ಮೇಣದಬತ್ತಿ ಬೆಳಗಿಸುವುದು, ಮೆರವಣಿಗೆ ಹಾಗೂ ಪಾಸ್ಕಾ ಗಾಯನಗಳು ನಡೆದವು. ಹಳೆಯ ಮತ್ತು ಹೊಸ ಒಡಂಬಡಿಕೆಯ ದೇವವಾಕ್ಯ ಪಠಣದೊಂದಿಗೆ ವಿಶ್ವಾಸಿಗಳು ಭಕ್ತಿಯಲ್ಲಿ ಪಾಲ್ಗೊಂಡರು. ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲವನ್ನು ಆಶೀರ್ವದಿಸಿ, ದೀಕ್ಷಾ ಸ್ನಾನದ ಪ್ರತಿಜ್ಞೆಯನ್ನು ನವೀಕರಿಸಲಾಯಿತು.

ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೋ ಕೆಥೆಡ್ರಲ್‌ನಲ್ಲಿ ಹಬ್ಬದ ಪ್ರಧಾನ ಬಲಿಪೂಜೆ ನೆರವೇರಿಸಿ ಈಸ್ಟರ್ ಸಂದೇಶ ನೀಡಿ ಮಾತನಾಡಿ, ಕ್ರಿಸ್ತರ ಪುನರುತ್ಥಾನವು ನಮಗೆ ಹೊಸ ಭರವಸೆಯನ್ನು ನೀಡುತ್ತದೆ. ಅಶಾಂತಿಯ ಸಮಾಜದಲ್ಲಿ ಶಾಂತಿ ನೆಲೆಸಲು ನಾವೆಲ್ಲರೂ ಶ್ರಮಿಸಬೇಕು. ಅನ್ಯಾಯ ಮತ್ತು ಅನೀತಿಯಿಂದ ನೊಂದಿರುವವರ ಬಾಳಿನಲ್ಲಿ ಭರವಸೆ ಮೂಡಿಸುವುದೇ ಈ ಹಬ್ಬದ ನಿಜವಾದ ಆಶಯ ಎಂದರು.

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಈಸ್ಟರ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ವಂ. ಸೈಮನ್ ಡಿಸೋಜಾ ಅಗ್ನಿ ಆಶೀರ್ವಾದ ಮಾಡಿದರು. ಬಳಿಕ ಮೊಂಬತ್ತಿ ಬೆಳಗಿದರು. ಅದರಿಂದ ಕ್ರೈಸ್ತರು ಮೊಂಬತ್ತಿ ಬೆಳಗಿ ಮೆರವಣಿಗೆ ನಡೆಸಿದರು. ನಂತರ ಚರ್ಚ್ ನಲ್ಲಿ ಪಾಸ್ಕಾ ಗೀತೆ ಹಾಡಲಾಯಿತು. ಬಳಿಕ ಪವಿತ್ರ ಸ್ನಾನದ ಭರವಸೆ ನವೀಕರಿಸಲಾಯಿತು. ಬಳಿಕ ಪೆರುವಾಯಿ ಫಾತಿಮಾ ಮಾತಾ ದೇವಾಲಯದ ಧರ್ಮಗುರು ವಂ. ಸೈಮನ್‌ ಡಿಸೋಜಾ ಸಂದೇಶ ನೀಡಿದರು.

ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಸುರತ್ಕಲ್, ಪುತ್ತೂರು, ಕಾಸರಗೋಡು, ವಿಟ್ಲ, ಮುಡಿಪು ಹಾಗೂ ಬೆಳ್ತಂಗಡಿ ವಲಯಗಳ ಎಲ್ಲಾ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕೆಥೋಲಿಕರಲ್ಲದೆ ಪ್ರೊಟೆಸ್ಟಂಟ್ ಹಾಗೂ ಇತರ ಧರ್ಮಸಭೆಗಳ ವ್ಯಾಪ್ತಿಯಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು. ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆದ ಪೂಜೆಯಲ್ಲಿ ಪ್ರಧಾನ ಧರ್ಮಗುರು ವಂ.ವಲೇರಿಯನ್ ಡಿಸೋಜ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು. ರವಿವಾರ ಬೆಳಗ್ಗೆ ಬಿಷಪ್ ಅವರು ತಮ್ಮ ನಿವಾಸದಲ್ಲಿ ವಿಶೇಷ ಈಸ್ಟರ್ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

Edited By : Manjunath H D
PublicNext

PublicNext

05/04/2026 04:26 pm

Cinque Terre

4.03 K

Cinque Terre

0