ಬ್ರಹ್ಮಾವರ: ಭೂಮಿಕಾ ಹಾರಾಡಿ ವತಿಯಿಂದ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ನಾಟಕೋತ್ಸವಕ್ಕೆ ಚಾಲನೆ ದೊರೆತಿದೆ. ಏಪ್ರಿಲ್ 3ರಿಂದ ಆರಂಭಗೊಂಡ ಈ ಸಂಭ್ರಮದ ಮೊದಲ ದಿನ 'ಕಾಲಚಕ್ರ' ನಾಟಕ ಪ್ರದರ್ಶನಗೊಂಡರೆ, ಎರಡನೇ ದಿನವಾದ ಶನಿವಾರ 'ಹೂ ಕನಸ ಜೋಕಾಲಿ' ಎಂಬ ಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಖ್ಯಾತ ರಂಗಕರ್ಮಿ ಸೇತುರಾಮ್ ಅವರಿಗೆ ಗಣ್ಯರ ಸಮ್ಮುಖದಲ್ಲಿ 'ರಂಗ ಭೂಮಿಕಾ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಸೇತುರಾಮ್ ಅವರು, ಸನ್ಮಾನ ಮತ್ತು ಪ್ರಶಸ್ತಿಗಳು ಅತೀ ಸಣ್ಣ ಪ್ರಾಯದಲ್ಲಿ ಬರಬಾರದು, ಹಾಗೆಯೇ ವಯಸ್ಸಾಗಿ ಕಣ್ಣು ಕಾಣದ, ಕಿವಿ ಕೇಳದ ಸ್ಥಿತಿಯಲ್ಲಿಯೂ ನೀಡಬಾರದು ಎಂದರು. ಅಂತಹ ಸಮಯದಲ್ಲಿ ಗೌರವ ನೀಡಿದರೂ ಅದನ್ನು ಸ್ವೀಕರಿಸುವವರಿಗೆ ಅದರ ಅರಿವಿರುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಮತ್ತು ಕುಂದಾಪುರಗಳ ನಡುವೆ ಬ್ರಹ್ಮಾವರದಂತಹ ಭಾಗದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮಗೆ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭೂಮಿಕಾ ಹಾರಾಡಿಯ ಸಂಚಾಲಕ ರಾಮ್ ಶೆಟ್ಟಿ, ಗಣ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಚಂದ್ರಶೇಖರ ನಾಯರಿ ಹಾಗೂ ಆರ್.ಎಂ. ಸಾಮಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾಟಕೋತ್ಸವದ ಭಾಗವಾಗಿ ಭಾನುವಾರ 'ತಳಿ' ಮತ್ತು ಸೋಮವಾರ 'ಸುಯೋಧನ' ನಾಟಕಗಳು ರಂಗವೇರಲಿವೆ. ಈ ರಾಜ್ಯ ಮಟ್ಟದ ನಾಟಕ ಪ್ರದರ್ಶನಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
Kshetra Samachara
05/04/2026 05:53 pm