ವಿಶೇಷ ವರದಿ
ಚಿಕ್ಕಮಗಳೂರು: ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸ್ವಾಮಿ ವಿವೇಕಾನಂದರ ಆ ಐತಿಹಾಸಿಕ ಚಿಕಾಗೋ ಪಯಣದ ಹಿಂದೆ ಕಾಫಿನಾಡು ಚಿಕ್ಕಮಗಳೂರಿನ ನಂಟಿದೆ ಎಂದರೆ ನೀವು ನಂಬಲೇಬೇಕು. ಹೌದು ಅಮೆರಿಕಾದಲ್ಲಿ ಸನಾತನ ಧರ್ಮದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ವಿವೇಕಾನಂದರಿಗೆ ಬೆನ್ನೆಲುಬಾಗಿ ನಿಂತು, ಆರ್ಥಿಕ ನೆರವು ನೀಡಿದ ಅಪ್ಪಟ ದೇಶಪ್ರೇಮಿಯ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ.
ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಲು ಕಾರಣರಾದವರಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಪ್ರಮುಖರು. 1865ರಲ್ಲಿ ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಜನಿಸಿದ ಇವರು, ವಿವೇಕಾನಂದರ ಅಪ್ಪಟ ಅನುಯಾಯಿಯಾಗಿದ್ದರು. ವಿವೇಕಾನಂದರಿಗೆ ಚಿಕಾಗೋ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಅವರು ಹಣದ ಕೊರತೆಯಿಂದ ಅಲ್ಲಿಗೆ ಹೋಗಲು ನಿರಾಕರಿಸಿದಾಗ ಸ್ವತಃ ತಾವೇ ಹಣದ ಜವಾಬ್ದಾರಿ ಹೊತ್ತು ಅಂದಿನ ಕಾಲಕ್ಕೆ ಸಾವಿರ ರೂಪಾಯಿಗಳ ಧನಸಹಾಯ ಮಾಡಿದ್ದರು. ಮಂಡ್ಯ ಮೂಲದವರಾದರೂ ತಂದೆಯ ಉದ್ಯೋಗದ ನಿಮಿತ್ತ ಚಿಕ್ಕಮಗಳೂರಿನಲ್ಲೇ ಬೆಳೆದ ಅಳಸಿಂಗ ಪೆರುಮಾಳ್, ನಂತರ ಮದ್ರಾಸ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವೇಕಾನಂದರು ಅಮೆರಿಕದಲ್ಲಿದ್ದಾಗಲೂ ಪೆರುಮಾಳ್ ಅವರಿಗೆ ಬೆಂಬಲವಾಗಿ ನಿಂತಿದ್ದರು ಎಂಬ ಅಂಶವನ್ನು ಸ್ವತಃ ವಿವೇಕಾನಂದರು ತಮ್ಮ ಪತ್ರಗಳಲ್ಲಿ ಉಲ್ಲೇಖಿಸಿದ್ದಾರೆ.
ಹೀಗೆ ವಿಶ್ವಮಟ್ಟದಲ್ಲಿ ಭಾರತದ ಧರ್ಮ ಮತ್ತು ಸಂಸ್ಕೃತಿ ರಾರಾಜಿಸುವಂತೆ ಮಾಡಿದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಪಯಣದ ಹಿಂದೆ ಚಿಕ್ಕಮಗಳೂರಿನ ಈ ದೇಶಪ್ರೇಮಿಯ ನಿಸ್ವಾರ್ಥ ಸೇವೆಯಿದೆ ಎಂಬುದು ಹೆಮ್ಮೆಯ ಸಂಗತಿ.
PublicNext
05/04/2026 09:38 pm