ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪರ್ಶ; ಒಂಟಿ ಜೀವದ ಬಾಳಿಗೆ ಹೊಸ ಬೆಳಕಿನ ಹರ್ಷ

ಅಥಣಿ: ಅಥಣಿ ತಾಲ್ಲೂಕಿನ ರೆಡ್ಡಿಯಾರಹಟ್ಟಿ ಗ್ರಾಮದ ಗಿರಿಮಲ್ಲ ಬಸಪ್ಪ ಚಿಗರಿ (51) ಅವರ ಬದುಕು ನಿಜಕ್ಕೂ ಮನ ಕಲುಕುವಂತದ್ದು. ಬದುಕಿನಲ್ಲಿ ಯಾರೂ ತಮ್ಮವರಿಲ್ಲದೆ, ಮದುವೆ- ಮಕ್ಕಳಿಲ್ಲದೆ, ಒಂಟಿತನವೇ ಸಂಗಾತಿಯಾಗಿ ಈ ಹಿರಿಯರು ಜೀವನ ಸಾಗಿಸುತ್ತಿದ್ದರು.

ಅದರಲ್ಲೂ ಗಿರಿಮಲ್ಲ ಅವರು 80% ರಷ್ಟು ಅಂಗವಿಕಲರು.

ದೇಹ ಸಹಕರಿಸದ ಸ್ಥಿತಿಯಲ್ಲಿ ಬದುಕು ನಡೆಸುವುದು ಎಷ್ಟು ಕಷ್ಟ ಎಂಬುದನ್ನು ಊಹಿಸಿದರೆ ಹೃದಯ ತುಂಬಿ ಬರುತ್ತದೆ.

ಯುವಕನಾಗಿದ್ದಾಗ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆಪಾಡು ನಡೆಸಿಕೊಂಡಿದ್ದ ಈ ವ್ಯಕ್ತಿ, ವಯಸ್ಸು ಹೆಚ್ಚಾದಂತೆ ಹಾಗೂ ಅಂಗವೈಕಲ್ಯದ ತೊಂದರೆಯಿಂದ ಕೆಲಸ ಮಾಡಲು ಆಗದೆ, ಬದುಕು ಇನ್ನಷ್ಟು ಸಂಕಷ್ಟಕ್ಕೆ ತಳ್ಳಲ್ಪಟ್ಟಿತು. ದಿನದ ಊಟಕ್ಕೂ ಇತರರ ದಯೆಯೇ ಆಶ್ರಯವಾಗಿತ್ತು.

ಇಂತಹ ಕಠಿಣ ಪರಿಸ್ಥಿತಿಯಲ್ಲಿಯೇ ಕಳೆದ 14 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಗೆ ಪ್ರತಿ ತಿಂಗಳು ₹1000 ಮಾಸಾಶನ ನೀಡುತ್ತಾ ಬಂದಿದೆ.

ದೇಹದ ದುರ್ಬಲತೆ ಮಧ್ಯೆಯೂ ಬದುಕನ್ನು ಸಾಗಿಸಲು ಈ ಸಹಾಯವೇ ಒಂದು ದೊಡ್ಡ ಬೆಂಬಲವಾಗಿತ್ತು.

ಆದರೆ, ಇವರ ನೋವು ಅಷ್ಟರಲ್ಲಿಯೇ ಮುಗಿದಿಲ್ಲ.

ವಾಸಿಸಲು ಸರಿಯಾದ ಮನೆ ಇಲ್ಲದೆ, ಒಂದು ಚಿಕ್ಕ ಸಿಂಟ್ಯಾಕ್ಸ್‌ನಲ್ಲಿ ಮಳೆ-ಬಿಸಿಲಿನ ಮಧ್ಯೆ ರಾತ್ರಿ ಕಳೆಯುತ್ತಿದ್ದ ಆ ದೃಶ್ಯ ಕಂಡರೆ ಯಾರ ಕಣ್ಣಲ್ಲೂ ನೀರು ಬರದೇ ಇರದು. ಮಳೆ ಬಿದ್ದರೆ ನೆನೆದು, ಚಳಿ ಬಂದರೆ ನಡುಗಿ, ಬಿಸಿಲಾದರೆ ಬೆಂದು ಬದುಕು ಸಾಗಿಸುತ್ತಿದ್ದ ಈ ಜೀವದ ಸ್ಥಿತಿ ಮನಸ್ಸನ್ನೇ ಕಲಕುವಂತಿತ್ತು.

ಇಂತಹ ಸಂದರ್ಭದಲ್ಲಿ ಮತ್ತೆ ಮಾನವೀಯತೆಯ ಕೈ ಹಿಡಿದದ್ದು ಇದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ಪಂಚಾಯತಿಯ ಸಹಕಾರದೊಂದಿಗೆ ಜಾಗವನ್ನು ಒದಗಿಸಿ, ಜ್ಞಾನ ವಿಕಾಸದ “ವ್ಯಾಸ್ತಲ್ಯ” ಕಾರ್ಯಕ್ರಮದಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಗೆ ವಾಸಕ್ಕೆ ಯೋಗ್ಯವಾದ ಸುಸಜ್ಜಿತ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದೆ.

ಈಗ ತನ್ನದೇ ಆದ ಮನೆಯೊಳಗೆ ನಿಂತು ನೋಡುವಾಗ…

ಅವರ ಕಣ್ಣಲ್ಲಿ ಮೂಡುವ ಸಂತೋಷ, ಹೃದಯದಲ್ಲಿ ತುಂಬಿರುವ ಕೃತಜ್ಞತೆ... ಅದು ಮಾತಿನಲ್ಲಿ ಹೇಳಲಾಗದ ಭಾವನೆ.

“ನನ್ನ ಜೀವನದಲ್ಲಿ ಇಷ್ಟೊಂದು ಸಂತೋಷ ಬರುತ್ತದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ” ಎಂಬ ಅವರ ಮಾತು ಕೇಳಿದರೆ, ಕಲ್ಲಿನ ಹೃದಯವೂ ಕರಗುತ್ತದೆ.

ಒಂಟಿತನ, ದೌರ್ಬಲ್ಯ ಮತ್ತು ಅಸಹಾಯಕತೆಯ ನಡುವೆಯೂ ಬದುಕು ಸಾಗಿಸುತ್ತಿದ್ದ ಗಿರಿಮಲ್ಲ ಅವರಿಗೆ, ಇಂದು ಹೊಸ ಜೀವನ ಕೊಟ್ಟಿರುವುದು ನಿಸ್ಸಂದೇಹವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ಇದು ಕೇವಲ ಒಂದು ಮನೆ ಅಲ್ಲ…

ಇದು ಒಂದು ಜೀವಕ್ಕೆ ದೊರೆತ ಗೌರವ, ಒಂದು ಹೃದಯಕ್ಕೆ ಸಿಕ್ಕ ನೆಮ್ಮದಿ ಮತ್ತು ಮಾನವೀಯತೆಯ ಅತ್ಯಂತ ಸುಂದರ ಉದಾಹರಣೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/04/2026 07:47 pm

Cinque Terre

40.37 K

Cinque Terre

4