ಖಾನಾಪುರ : ಕೈಯಲ್ಲಿ ಕೇಸರಿ ಬಣ್ಣದ ಅಬುಲಿ ಹೂವುಗಳು. ಅವುಗಳ ಸೌಂದರ್ಯ ಮಾಸಿ ಹೋಗುವ ಮುನ್ನ ಮಾರಾಟ ಮಾಡಿ ಬಿಡಿಗಾಸು ಸಂಪಾದಿಸುವ ತವಕ. ಸುಡುವ ನೆತ್ತಿಯ ಬಿಸಿಲು.. ಇಳಿ ವಯಸ್ಸಾದರೂ ಸ್ವಾಭಿಮಾನದ ಬದುಕು ನಡೆಸಬೇಕೆಂಬ ಆಸೆ. ಇಡೀ ಶರೀರಕ್ಕೆ ಕೋಲಿನ ಆಸರೆ, ಆದರೂ ದುಡಿದೇ ತಿನ್ನಬೇಕೆಂಬ ತವಕ..
ದರೋಡೆ ಮಾಡಿ, ಕೊಲೆ ಮಾಡಿ, ಸುಲಿಗೆ ಮಾಡಿ, ಮೋಸದ ಹಣ ಗಳಿಸುವವರ ಸಂಖ್ಯೆಯೇ ಇಂದಿನ ಕಾಲದಲ್ಲಿ ಹೆಚ್ಚಾಗುತ್ತಿರುವಾಗ. 70-75 ವರ್ಷದ ಈ ವೃದ್ಧ ಇಂದಿಗೂ ಹೂವು ಮಾರಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಮಾನವೀಯತೆ ಎಂಬುದು ಜಾತಿ, ದೇಶ, ರಾಜ್ಯ, ಭಾಷೆ ಎಲ್ಲವನ್ನೂ ಮೀರಿದ್ದು, ಈ ವೃದ್ಧ ಮಾತನಾಡುವುದು ಮರಾಠಿಯಾದರೂ ಸ್ವಾಭಿಮಾನಕ್ಕೆ ಇವರು ಭಾಷೆ ಅಂಟು ಹಚ್ಚಿಲ್ಲ.
ಮಹಾರಾಷ್ಟ್ರದ ಗಡಿ ಭಾಗದ ಖಾನಾಪುರದಲ್ಲಿ ನಮ್ಮ ಕಣ್ಣಿಗೆ ಕಂಡ ಈ ವೃದ್ಧನ ಹೆಸರು ಪುನ್ನಪ್ಪ. ರಸ್ತೆಯ ಪಕ್ಕ ನಿಂತು ಹಾದು ಹೋಗುವ ವಾಹನಗಳಿಗೆ ಕೈ ಮಾಡಿ ತಾನು ಸಿದ್ಧಪಡಿಸಿದ ಅಬುಲಿ ಹೂವುಗಳ ಮಾಲೆಯನ್ನು ಮಾರಾಟ ಮಾಡುವುದು ಇವರ ಕಾಯಕ. ಇರುವ ಇಬ್ಬರು ಮಕ್ಕಳು ಬೆಳಗಾವಿಯಲ್ಲಿ ಗಾರೆ ಕೆಲಸ ಮಾಡ್ತಾರೆ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಇಳಿ ವಯಸ್ಸನ್ನೂ ಲೆಕ್ಕಿಸದೇ ಸ್ವಾಭಿಮಾನದ ಬದುಕನ್ನು ಪುನ್ನಪ್ಪ ನಡೆಸುತ್ತಿದ್ದಾರೆ. ಜಗವೆಲ್ಲ ದುಡಿಯುತಿದೆ ನೋಡೊಮ್ಮೆ ಎದ್ದು ದುಡಿದು ತಿನ್ನುವುದೇ ಬಡತನಕ್ಕೆ ಮದ್ದು ಎಂಬ ಸುಭಾಷಿತದಂತೆ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ತಂದೆ, ತಾಯಿಯನ್ನು ಇಂದಿಗೂ ದುಡಿಸುತ್ತಿರುವ ಅನೇಕ ಜನ ಯುವಕರಿಗೆ ಈ ಇಳಿ ವಯಸ್ಸಿನ ವೃದ್ಧ ಮಾದರಿಯಾಗಬೇಕಲ್ಲವೇ?-
ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2026 06:21 pm
LOADING...