ವಿಶೇಷ ವರದಿ
ಕಲಘಟಗಿ: "ಇಂತಹ ಪರಿಸ್ಥಿತಿ ಮತ್ತ್ಯಾವ ಕುಟುಂಬಕ್ಕೂ ಬಾರದಿರಲಿ..." ಇದು ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ದಲಿತ ಕುಟುಂಬವೊಂದರ ಕರುಣಾಜನಕ ಕಥೆ. ಸಾಲದ ಸುಳಿಗೆ ಸಿಲುಕಿ ಆಸರೆಯಾಗಬೇಕಿದ್ದ ಮನೆಯಿಂದಲೇ ಹೊರದಬ್ಬಲ್ಪಟ್ಟ ಈ ಕುಟುಂಬದ ಅಳಲು ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ.
ಹುಣಸಿಕಟ್ಟಿ ಗ್ರಾಮದ ಲಕ್ಷ್ಮಿ ಹರಿಜನ ಎಂಬುವವರು ಮನೆ ನಿರ್ಮಿಸಲು ಖಾಸಗಿ ಬ್ಯಾಂಕೊಂದರಿಂದ ಸಾಲ ಪಡೆದಿದ್ದರು. ಪಡೆದ ಹಣವನ್ನು ಮನೆ ನಿರ್ಮಾಣಕ್ಕೆ ಬಳಸಿಕೊಂಡರಾದರೂ, ಆರ್ಥಿಕ ಮುಗ್ಗಟ್ಟಿನಿಂದ ಮನೆ ಕೆಲಸ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಕುಟುಂಬವು ತಮ್ಮ ಹಳೆಯ ಮನೆಯಲ್ಲಿಯೇ ವಾಸವಿತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಬ್ಯಾಂಕಿನ ಕಂತು ಪಾವತಿಸಲು ಸಾಧ್ಯವಾಗದ ಕಾರಣ, ಬ್ಯಾಂಕ್ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡು ಕುಟುಂಬದವರನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಜಡಿದಿದ್ದಾರೆ!
ಬೀದಿಗೆ ಬಿದ್ದ ಬದುಕು: ಈ ಕುಟುಂಬದಲ್ಲಿ ಇಬ್ಬರು ಅಂಗವಿಕಲರಿದ್ದಾರೆ. ಮನೆಯ ಒಳಗೆ ದಿನಸಿ ಸಾಮಗ್ರಿಗಳು ಇರುವಾಗಲೇ ಬೀಗ ಹಾಕಲಾಗಿದ್ದು, ಸದ್ಯ ಇಡೀ ಕುಟುಂಬ ಬೀದಿಯಲ್ಲೇ ಜೀವನ ನಡೆಸುತ್ತಿದೆ. ರಾತ್ರಿಯಾದರೆ ಎದುರು ಮನೆಯ ಕಟ್ಟೆಯೇ ಇವರಿಗೆ ಆಸರೆ.
"ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಯುವತಿಗೆ ಓದಲು ಜಾಗವಿಲ್ಲದೆ ಪರದಾಡುವಂತಾಗಿದೆ. ವಯಸ್ಸಿಗೆ ಬಂದ ಮಗಳನ್ನು ಇಟ್ಟುಕೊಂಡು ಬೀದಿಯಲ್ಲಿ ಮಲಗುವ ಸ್ಥಿತಿ ಬಂದಿದೆ" ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಒಂದೆಡೆ ಸಾಲ ತೀರಿಸಲಾಗದ ಅಸಹಾಯಕತೆ, ಇನ್ನೊಂದೆಡೆ ಸೂರು ಕಳೆದುಕೊಂಡ ಆತಂಕ. ಕಗ್ಗತ್ತಲಲ್ಲಿರುವ ಈ ಕುಟುಂಬದ ಬದುಕಿಗೆ ಬೆಳಕಾಗಲು ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಸಂತೋಷ್ ಲಾಡ್ ಅವರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕೆಂದು 'ಪಬ್ಲಿಕ್ ನೆಕ್ಸ್ಟ್' ಮೂಲಕ ಸಂತ್ರಸ್ತರು ವಿನಂತಿಸಿದ್ದಾರೆ.
- ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2026 06:31 pm