ಧಾರವಾಡ: ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಮುಂದುವರಿದ್ದು, ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಶೇ. 66.64ರಷ್ಟು ಡಿಜಿಟಲೀಕರಣ ಮಾಡುವ ಕೆಲಸ ಪೂರ್ಣಗೊಂಡಿದೆ.
ಧಾರವಾಡ ಜಿಲ್ಲೆಯಲ್ಲಿ 2.52 ಕೋಟಿಗೂ ಅಧಿಕ ಪುಟಗಳು ಸ್ಕ್ಯಾನಿಂಗ್ ಆಗಿವೆ. 15-20 ದಿನಗಳಲ್ಲಿ ಈ ಕೆಲಸವನ್ನು ಸಂಪೂರ್ಣಗೊಳಿಸುವ ವಿಶ್ವಾಸವನ್ನು ಧಾರವಾಡ ಜಿಲ್ಲಾಡಳಿತ ಹೊಂದಿದೆ.
ಸಾರ್ವಜನಿಕರಿಗೆ ತ್ವರಿತವಾಗಿ ದಾಖಲೆಗಳನ್ನು ನೀಡುವುದು ಮತ್ತು ಆಡಳಿತ ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕಂದಾಯ ಇಲಾಖೆಯ ಪೂರ್ಣ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಒಂದು ವರ್ಷದ ಹಿಂದೆ ಚಾಲನೆ ನೀಡಿತ್ತು. ಧಾರವಾಡ ತಾಲೂಕು, ಜಿಲ್ಲಾಧಿಕಾರಿ ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಡಿಜಿಟಲೀಕರಣಗೊಳಿಸುವ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿದೆ. ಧಾರವಾಡ
ಜಿಲ್ಲೆಯ ನವಲಗುಂದ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ನಗರ, ಅಳ್ನಾವರ, ಅಣ್ಣಿಗೇರಿ ತಾಲೂಕಿನಲ್ಲಿ ದಾಖಲೆಗಳನ್ನು ಸಂಪೂರ್ಣವಾಗಿ (ಶೇ. 100) ಡಿಜಿಟಲೀಕರಣಗೊಳಿಸಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಶೇ. 94.45, ಕುಂದಗೋಳ ತಾಲೂಕಿನಲ್ಲಿ ಶೇ. 58.52, ಧಾರವಾಡ ತಾಲೂಕಿನಲ್ಲಿ ಶೇ. 29.15ರಷ್ಟು ದಾಖಲೆಗಳು ಡಿಜಿಟಲೀಕರಣವಾಗಿವೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಶೇ.11.16, ಧಾರವಾಡ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶೇ.34ರಷ್ಟು ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಹಳಷ್ಟು ವರ್ಷಗಳ ದಾಖಲೆಗಳು ಕಾಗದದ ರೂಪದಲ್ಲಿ ಮತ್ತು ಕೈಬರಹದಲ್ಲಿದ್ದವು. ಅವುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಜನತೆಗೆ ಅಗತ್ಯವಿದ್ದ ಸಂದರ್ಭದಲ್ಲಿ ಆ ದಾಖಲೆಗಳನ್ನು ಒದಗಿಸಲು ಸಹ ಸಮಯ ಬೇಕಿತ್ತು. ಇದಕ್ಕೆ ಇತಿಶ್ರೀ ಹಾಡಲು ಸರ್ಕಾರ ದಾಖಲೆಗಳ ಡಿಜಿಟಲೀಕರಣಕ್ಕೆ ಮುಂದಾಗಿತ್ತು. ಇದೀಗ ಡಿಜಿಟಲೀಕರಣದಲ್ಲಿ ಪ್ರಗತಿ ಸಾಧಿಸಿದೆ.
ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣಗೊಳ್ಳುತ್ತಿರುವ ದಾಖಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ಸಹಿ ಸಹ ಡಿಜಿಟಲೀಕರಣ ಮಾಡಲಾಗಿರುತ್ತದೆ. ಹೀಗಾಗಿ ದಾಖಲೆಗಳನ್ನು ಪಡೆದುಕೊಂಡು ಅದಕ್ಕೆ ಸಹಿ ಪಡೆಯುವ ಅಗತ್ಯ ಇಲ್ಲ. ಸ್ಕ್ಯಾನ್ ಮಾಡಿದ ಪುಟಗಳನ್ನು ಸರ್ಕಾರದ ಅಧಿಕೃತ ತಂತ್ರಾಂಶಕ್ಕೆ ಜೋಡಿಸಲಾಗುತ್ತದೆ. ಇವುಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿರುತ್ತಾರೆ. ಬಳಿಕ ಎಲ್ಲವೂ ಡಿಜಿಟಲ್ ಸಹಿಗಳನ್ನು ಹಾಕಿ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಯಾವುದೇ ದಾಖಲೆ ಪಡೆದುಕೊಳ್ಳಲು ಸುಲಭವಾಗಲಿದೆ. ಸಹಿಗಾಗಿ ಪದೇ ಪದೇ ಕಚೇರಿಗೆ ಅಲೆದಾಟ ಸಹ ತಪ್ಪಲಿದೆ. ಸಂಬಂಧಪಟ್ಟ ಯಾವುದೇ ದಾಖಲೆಗಳನ್ನು ಸೂಕ್ತ ಮಾಹಿತಿ ನೀಡಿ ಸುಲಭವಾಗಿ ಪಡೆದುಕೊಳ್ಳಲು ಅನುಕೂಲವಾಗಲಿದೆ.
ಧಾರವಾಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ 2,52,19,189 ಪುಟಗಳನ್ನು ಸ್ಕ್ಯಾನಿಂಗ್ ಮಾಡಿ, ತಂತ್ರಾಂಶಕ್ಕೆ ಅಪ್ಲೋಡ್ ಮಾಡಲಾಗಿದ್ದು, ಇದರಲ್ಲಿ 5,84,516 ಕಡತಗಳು, 8,04,239 ಡಾಕ್ಯುಮೆಂಟ್‌ಗಳಿವೆ. ಇದಲ್ಲದೆ 23,681 ರಿಜಿಸ್ಟರ್‌ಗಳಿದ್ದು, 21,087 ರಿಜಿಸ್ಟರ್‌ಗಳು ಅಪ್‌ಲೋಡ್ ಆಗಿದೆ. 2,77,674 ಕಡತಗಳು ಹಾಗೂ 2,594 ರಿಜಿಸ್ಟರ್‌ಗಳು ಸ್ಕ್ಯಾನಿಂಗ್ ಆಗುವುದು ಬಾಕಿ ಇದೆ. ಒಟ್ಟಾರೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದರಲ್ಲಿ ಧಾರವಾಡ ಜಿಲ್ಲೆ ಭಾಗಶಃ ಕೆಲಸ ಪೂರ್ಣಗೊಳಿಸಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2026 07:45 pm