ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ವಿರುದ್ಧ ತನಿಖೆಗೆ ಸಮಿತಿ ರಚನೆ

ಧಾರವಾಡ: ಅಕ್ರಮ ನೇಮಕಾತಿ, ಸಿಬ್ಬಂದಿ ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.

ಕರ್ನಾಟಕ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಚಂದ್ರಶೇಖರ ಎಂ. ಜೋಶಿ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಡಾ. ಪಿ.ಎಲ್. ಪಾಟೀಲ ಅವರ ಕೃಷಿ ವಿಶ್ವವಿದ್ಯಾಲಯ ಕುಲಪತಿಯ ಅಧಿಕಾರಾವಧಿ ಪೂರ್ಣಗೊಳ್ಳುವುದರೊಳಗಾಗಿ ಶಿಫಾರಸುಗಳನ್ನೊಳಗೊಂಡ ವರದಿ ನೀಡಬೇಕೆಂದು ತಿಳಿಸಲಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತಜ್ಞರ ನೇಮಕದಲ್ಲಿ ಅಕ್ರಮ ನಡೆದಿದೆ, ಸಿಬ್ಬಂದಿ ವರ್ಗಾವಣೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಹಾಗೂ ಟೆಂಡರ್ ನೀಡಿಕೆಯಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಕೃಷಿ ವಿವಿ ಕುಲಪತಿ ವಿರುದ್ಧ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಜ್ಯಪಾಲರ ಸೂಚನೆಯನ್ವಯ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಸ್ಪಷ್ಟೀಕರಣ ನೀಡಲಾಗಿತ್ತು. ಇದಕ್ಕೆ ಕುಲಪತಿಗಳು ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರ ಆರೋಪ ಹಾಗೂ ವಿಶ್ವವಿದ್ಯಾಲಯದ ಕುಲಪತಿಯ ಸ್ಪಷ್ಟೀಕರಣ ಪರಿಶೀಲಿಸಿದ ನಂತರ ಈ ಆರೋಪಗಳ ಕುರಿತು ವಿಸ್ತೃತ ತನಿಖೆ ಅವಶ್ಯಕತೆಯಿದೆ ಎಂಬುದನ್ನು ಮನಗಂಡ ರಾಜ್ಯಪಾಲರು ತ್ವರಿತವಾಗಿ ತನಿಖೆ ನಡೆಸುವುದು ಅವಶ್ಯಕವಾಗಿದೆ. ಡಾ. ಪಿ.ಎಲ್. ಪಾಟೀಲ ಅವರ ಕುಲಪತಿ ಅವಧಿ 2026ರ ಮೇ 22ಕ್ಕೆ ಪೂರ್ಣಗೊಳ್ಳಲಿದ್ದು, ಸೇವಾ ಅವಧಿ ಮುಗಿಯುವವರೆಗೂ ಕೃಷಿ ವಿಶ್ವವಿದ್ಯಾಲಯ ಕುರಿತು ಅವರು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲಗೆ ನಿರ್ಬಂಧ ವಿಧಿಸಿದ್ದಾರೆ. ಒಂದು ವೇಳೆ ಮಹತ್ವದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಬೇಕಾದರೆ ರಾಜ್ಯ ಸರಕಾರದ ಕೃಷಿ ಇಲಾಖೆ ಮೂಲಕ ರಾಜ್ಯಪಾಲರ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ. ಸೆಲ್ವಕುಮಾರ್‌ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬಿ.ಎಸ್. ಪ್ರಶಾಂತಕುಮಾರ ಪತ್ರ ಬರೆದಿದ್ದು, ಸಮಿತಿ ರಚನೆ ಮಾಡಿ ವಿಚಾರಣೆ ನಡೆಸಬೇಕು ಹಾಗೂ ಶಿಫಾರಸುಗಳೊಂದಿಗೆ ಕುಲಪತಿಗಳ ಅಧಿಕಾರಾವಧಿ ಪೂರ್ಣಗೊಳ್ಳುವ ಮುಂಚೆಯೇ ಶಿಫಾರಸುಗಳನ್ನೊಳಗೊಂಡ ವರದಿ ನೀಡಬೇಕು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬಿ.ಎಸ್. ಪ್ರಶಾಂತಕುಮಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 04:46 pm

Cinque Terre

16.62 K

Cinque Terre

0

ಸಂಬಂಧಿತ ಸುದ್ದಿ