ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಇದೀಗ 39ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆಯ ಬಳಿಕ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಇರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ, ಅಮೆರಿಕ ನೀಡಿದ ಗಡುವು ಮುಗಿದ ನಂತರ ಇರಾನ್ ಅನ್ನು ಸಂಪೂರ್ಣವಾಗಿ ಒಂದೇ ರಾತ್ರಿಯಲ್ಲಿ ನಾಶ ಮಾಡಬಹುದು ಎಂದು ಹೇಳಿದ್ದಾರೆ.
"ಇರಾನ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ನೀಡಿದ ಗಡುವು ಪಾಲಿಸದಿದ್ದರೆ, ಅಮೆರಿಕದ ಸೈನ್ಯಕ್ಕೆ ಇರಾನ್‌ನಲ್ಲಿರುವ ಪ್ರತಿಯೊಂದು ಸೇತುವೆ ಮತ್ತು ಪ್ರತಿಯೊಂದು ವಿದ್ಯುತ್ ಕೇಂದ್ರಗಳನ್ನು ಕೇವಲ 4 ಗಂಟೆಗಳಲ್ಲಿ ನಾಶಪಡಿಸುವ ಯುದ್ಧ ಯೋಜನೆ ರೆಡಿಯಾಗಿದೆ" ಎಂದು ಎಚ್ಚರಿಸಿದ್ದಾರೆ. ಮಂಗಳವಾರ ಅಂದರೆ, ಇಂದು ಸಂಜೆ 8 ಗಂಟೆಯ ಒಳಗಾಗಿ ಇರಾನ್ ತಾರ್ಕಿಕ ನಿರ್ಧಾರವೊಂದಕ್ಕೆ ಬರಬೇಕಿದೆ ಎಂದು ಟ್ರಂಪ್ ತಾಕೀತು ಮಾಡಿದ್ದಾರೆ.
ಅಮೆರಿಕ ಈಗಾಗಲೇ ಇರಾನ್ ಮೇಲೆ ದಾಳಿ ನಡೆಸಲು ಬೇಕಾದ ಸಿದ್ಧತೆಗಳನ್ನು ಆರಂಭಿಸಿದ್ದು, ಪ್ರಮುಖ ಗುರಿಗಳ "ಹಿಟ್ ಲಿಸ್ಟ್" ಅನ್ನು ಸಿದ್ಧಪಡಿಸಿಕೊಂಡಿದೆ. ಅಮೆರಿಕ ಗುರುತಿಸಿರುವ ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಪಟ್ಟಿಯಲ್ಲಿ ಇವು ಸೇರಿವೆ:
* ಪ್ರಮುಖ ವಿದ್ಯುತ್ ಸ್ಥಾವರಗಳು
* ಪರಮಾಣು ಕೇಂದ್ರಗಳು
* ತಾಂತ್ರಿಕ ಮತ್ತು ಸಂಶೋಧನಾ ವಿಶ್ವವಿದ್ಯಾಲಯಗಳು
* ಐಆರ್‌ಜಿಸಿ ಕಚೇರಿಗಳು (IRGC offices)
* ಉಪ್ಪು ನೀರಿನ ಸಂಸ್ಕರಣಾ ಘಟಕಗಳು
ಅಧ್ಯಕ್ಷರ ಅನುಮತಿಗಾಗಿ ಕಾಯುತ್ತಿರುವ ಅಮೆರಿಕ, ಇರಾನ್ ಮೇಲೆ ಭೂದಾಳಿಗೆ ಈಗಾಗಲೇ ಸಿದ್ಧವಾಗಿದೆ.
ಇಂದು ರಾತ್ರಿಯ ಬಳಿಕ ಮಧ್ಯಪ್ರಾಚ್ಯ ರಣ ಭೀಕರ ಕಾಳಗಕ್ಕೆ ಸಾಕ್ಷಿಯಾಗುತ್ತಾ ಎಂಬ ಆತಂಕ ಹೆಚ್ಚಾಗಿದೆ. ಇರಾನ್ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗೆ ಬಗ್ಗದಿದ್ದರೆ, ಭೀಕರ ದಾಳಿಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಅಮೆರಿಕ ಮೂಲಗಳು ತಿಳಿಸಿವೆ.
PublicNext
07/04/2026 01:56 pm