ಶಿರಸಿ: "ಶಿಕ್ಷಣ ಯಾರ ಸ್ವತ್ತು ಅಲ್ಲ, ಅದು ಸರ್ವರ ಸ್ವತ್ತು, ಎಲ್ಲರೂ ಶಿಕ್ಷಣವಂತರಾಗಬೇಕು." ಶಿಕ್ಷಣ ಪ್ರತಿಯೊಬ್ಬರ ಹಕ್ಕು; ಪ್ರತಿಯೊಬ್ಬರೂ ಶಿಕ್ಷಣವನ್ನು ಕಲಿಯಬೇಕು. ಆಗ ಮಾತ್ರ ನಮ್ಮ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಹಾನ್ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ ಮಾತುಗಳನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಅವರು ನೆನಪಿಸಿದರು.
ಏಪ್ರಿಲ್ 14ರಂದು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಶಿರಸಿ, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು. ನಗರದ ಬಾಪೂಜಿ ನಗರದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಸಕ ಭೀಮಣ್ಣ ನಾಯ್ಕ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸ್ಮರಣೆ
ಅಂಬೇಡ್ಕರ್ ಅವರು ಉನ್ನತ ಜಾತಿಗಳ ತುಳಿತಕ್ಕೆ ಒಳಗಾಗಿದ್ದರೂ, ಅದರ ವಿರುದ್ಧ ಸಿಡಿದೆದ್ದು ನಿಂತರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವಾದ ಸಂವಿಧಾನವನ್ನು ನಮಗೆ ಅರ್ಪಿಸಿದ ಮಹಾನ್ ಚೇತನ ಅವರು ಎಂದು ಶಾಸಕರು ಸ್ಮರಿಸಿದರು.
ಸಂವಿಧಾನದ ಆಶಯಗಳ ಕುರಿತು ಕಳವಳ
ಈಗಲೂ ಅವರ ಸಂವಿಧಾನದ ಆಶಯಗಳ ಪ್ರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದೇವೆ ಎಂಬ ಸಂಶಯ ನನ್ನನ್ನು ಕಾಡುತ್ತಿದೆ ಎಂದು ಭೀಮಣ್ಣ ನಾಯ್ಕ್ ಕಳವಳ ವ್ಯಕ್ತಪಡಿಸಿದರು. ಆದರೆ, "ಒಂದಂತೂ ಸತ್ಯ; ಸೂರ್ಯ-ಚಂದ್ರ ಇರುವವರೆಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಜರಾಮರವಾಗಿ ಉಳಿಯುತ್ತದೆ" ಎಂದು ಅವರು ದೃಢವಾಗಿ ಹೇಳಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಎಸಿ ಚಂದ್ರಶೇಖರ್ ಆರ್.ಜಿ, ತಹಶೀಲ್ದಾರ್ ಪಟ್ಟ ರಾಜಗೌಡ, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಡಿಡಿಪಿಐ ಡಿ.ಆರ್. ನಾಯ್ಕ್, ಡಿವೈಎಸ್‌ಪಿ ಗೀತಾ ಪಾಟೀಲ್, ಶೈಲೇಶ್ ಗಾಂಧಿ, ಬಸವರಾಜ್ ದೊಡ್ಡಮನಿ, ದೀಪಾ ತಳವಾರ್, ವಿನಾಯಕ್ ಸಿ. ನಾಯ್ಕ್, ಸುಭಾಸ್ ಕಾನಡೆ, ಅರ್ಜುನ್ ಮಿಂಟಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
14/04/2026 03:02 pm