ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತ್ರೆ ಸಂಭ್ರಮಕ್ಕೆ ನೀರಿಲ್ಲ, ಬಿಸಿಲಲ್ಲಿ ಭಕ್ತರ ಪರದಾಟ!

ಚಳ್ಳಕೆರೆ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂಬ ಸರ್ಕಾರದ ಸೂಚನೆಗಳು ಕಾಗದದ ಮೇಲೆಯೇ ಉಳಿದಿವೆ ಎಂಬುದಕ್ಕೆ ಚಳ್ಳಕೆರೆ ತಾಲೂಕಿನ ಬಸವೇಶ್ವರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಟಿ.ಎನ್. ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡ ಪರಿಣಾಮ, ಸಾವಿರಾರು ಭಕ್ತರು ಬಿಸಿಲಿನ ತಾಪದಲ್ಲಿ ನೀರಿಗಾಗಿ ಪರದಾಡಿದರು.

ನೀರಿನ ಅಭಾವಕ್ಕೆ ಕಾರಣ

ಮಜರೆ ಗ್ರಾಮವಾದ ಬಸವೇಶ್ವರ ಗೊಲ್ಲರಹಟ್ಟಿಯಲ್ಲಿ ರಥೋತ್ಸವದ ದಿನವೇ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸಲಿಲ್ಲ. ಪ್ರತಿವರ್ಷ ನಡೆಯುವ ಈ ಜಾತ್ರೆಗೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಈ ಬಾರಿ ನೀರಿನ ಘಟಕದಲ್ಲಿ ನೀರು ಲಭ್ಯವಿಲ್ಲದೆ ಭಕ್ತರು ತೀವ್ರ ಸಂಕಷ್ಟ ಅನುಭವಿಸಿದರು. ಖಾಲಿ ಕೊಡ ಹಾಗೂ ಕ್ಯಾನ್‌ಗಳನ್ನು ತಂದುಕೊಂಡಿದ್ದರೂ, ನೀರು ಸಿಗದೆ ನಿರಾಶರಾದರು.

ಸಾರ್ವಜನಿಕರ ಆಕ್ರೋಶ

ಸರಕಾರದ ವತಿಯಿಂದ ಸ್ಥಾಪಿತವಾದ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಂತಹ ದೊಡ್ಡ ಮಟ್ಟದ ಜಾತ್ರೆಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುದ್ಧ ನೀರಿನ ಘಟಕವನ್ನು ಯಾವಾಗ ದುರಸ್ತಿ ಮಾಡಲಾಗುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.

Edited By :
Kshetra Samachara

Kshetra Samachara

21/04/2026 09:19 am

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ