ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸಮರ್ಪಕ ರಸ್ತೆ ಮೂಲಸೌಕರ್ಯವಿಲ್ಲದೆ ಕರಿಯಣ್ಣನಹಳ್ಳಿ ಪರದಾಟ

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿಯ ಕರಿಯಣ್ಣನಹಳ್ಳಿ ಗ್ರಾಮ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಅಂಚಿನ ಗ್ರಾಮವಾಗಿದೆ. ಇತ್ತ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಗ್ರಾಮಕ್ಕೆ ಈ ವರೆಗೆ ಸರಕಾರಿ ಬಸ್ ಸೌಲಭ್ಯ ಇಲ್ಲ. ಇನ್ನು ಇಲ್ಲಿಂದ ಸಾಗಲಗಟ್ಟೆ ಮಾರ್ಗವಾಗಿ ಜಗಳೂರಿಗೆ ಸಂಪರ್ಕಿಸುವ ರಸ್ತೆ ಗ್ರಾಮದ ಇತಿಹಾಸದಲ್ಲೇ ಟಾರು ಕಂಡಿಲ್ಲ. ರಸ್ತೆಯ ಮೇಲೆ ಎಲ್ಲಂದರಲ್ಲಿ ತಗ್ಗು ಗುಂಡಿ ಬಿದ್ದು ಅದ್ವಾನವಾಗಿದೆ. ರೈತರು ಜಮೀನಿಗೆ ತೆರಳಲು, ಮಕ್ಕಳು ಶಾಲಾ ಕಾಲೇಜಿಗೆ ತೆರಳಲು, ಹಾಗೂ ಭಾರೀ ವಾಹನ ಈ ರಸ್ತೆ ಮೂಲಕ ಚಲಾಯಿಸಲು ಪ್ರಾಣ ಕೈಲಿ ಹಿಡಿದು ಸಾಗುವ ಅನಿವಾರ್ಯತೆ ಉಂಟಾಗಿದೆ. ಒಂದೂವರೆ ಕಿ. ಮೀ ರಸ್ತೆ ಸರಿಯಿಲ್ಲದ ಕಾರಣ, ಜಗಳೂರಿಗೆ ತೆರಳಲು 11ಕಿಮಿ ಸುತ್ತುವರೆದು ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಿದೆ.

ಬಡವರು, ಕೃಷಿಕರು, ದಲಿತರು ಹೆಚ್ಚಾಗಿರುವ ಈ ಗ್ರಾಮದಲ್ಲಿ 700-800 ಜನಸಂಖ್ಯೆ ಇದೆ. 500 ಕ್ಕೂ ಹೆಚ್ಚು ಮತದಾರರಿದ್ದಾರೆ. 250ಕ್ಕೂ ಹೆಚ್ಚು ಮಹಿಳಾ ಮತದಾರರಿದ್ದಾರೆ.

ರಾಜ್ಯ ಸರಕಾರ ಶಕ್ತಿ ಯೋಜನೆಯಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರವಾಸಕ್ಕೆ ಅನುಕೂಲ ಮಾಡಿದೆ, ಆದರೆ ಈ ಗ್ರಾಮಕ್ಕೆ ಸರಕಾರಿ ಬಸ್ ಬರದ ಕಾರಣ, ಮಹಿಳೆಯರು ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಮಳೆಯಾದರೆ ಈ ರಸ್ತೆಯ ಮೂಲಕ ಶಾಲಾ ಮಕ್ಕಳು ಉಸಿರು ಬಿಗಿ ಹಿಡಿದು ಓಡಾಡುತ್ತಾರೆ. ಇದೇ ಮಾರ್ಗದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ ಅಡಿಕೆ ತೋಟ ಕೂಡ ಇದೆ. ಆದರೂ ರಸ್ತೆ ಮಾತ್ರ ಸುಧಾರಿಸಿಲ್ಲ. ಗಡಿರಸ್ತೆ ಅನ್ನೋ ನಿರ್ಲಕ್ಷ್ಯ ಸರಿಯಲ್ಲ ಅಂತಾ ಗ್ರಾಮಸ್ಥರು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಎರಡು ಜಿಲ್ಲೆಗಳು ಹಾಗೂ ಎರಡು ತಾಲೂಕಿನ ಗ್ರಾಮದ ಗಡಿ ಅಂಚಿನ ಗ್ರಾಮ ಸದ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಣ್ತೆರೆದು ನೋಡಿ, ರಸ್ತೆ ನಿರ್ಮಾಣ ಮಾಡಿಸಿ, ಜನರಿಗೆ ಅನುಕೂಲ ಮಾಡ್ತಾರಾ ಅಂತಾ ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

29/04/2026 08:17 am

Cinque Terre

13.57 K

Cinque Terre

0

ಸಂಬಂಧಿತ ಸುದ್ದಿ