ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೋಟ್‌ ಮಾಡಿ ಎಂದ 'ಟೀನಾ' ಸೆಲ್ಪಿಗೆ ಮುಗಿಬಿದ್ದ ಜನ ....ಯಾರೀ ಟೀನಾ?

ಕೊಯಮತ್ತೂರು: ತಮಿಳುನಾಡು ವಿಧಾನಸಭಾ ಚುನಾವಣೆ ಮತದಾನದ ಸಂದರ್ಭದಲ್ಲಿ ಕೊಯಮತ್ತೂರಿನ ಸರ್ಕಾರಿ ಕಲಾ ಕಾಲೇಜಿನ ಮತಗಟ್ಟೆಯಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ಇಲ್ಲಿ ಮತದಾನ ಮಾಡಲು ಬಂದ ಜನರನ್ನು ಸ್ವಾಗತಿಸುತ್ತಿರುವುದು ಯಾರೋ ವ್ಯಕ್ತಿಯಲ್ಲ, ಬದಲಿಗೆ ಸಾಕ್ಷಾತ್ ಒಂದು ರೋಬೋಟ್! ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ಅಪರೂಪದ ಸಂಗಮಕ್ಕೆ ಈ ಮತಗಟ್ಟೆ ಸಾಕ್ಷಿಯಾಗಿದೆ. 'ಟೀನಾ' ಎಂಬ ಹೆಸರಿನ ಈ ರೋಬೋಟ್ ಮತದಾರರಿಗೆ ಸಿಹಿ ತಿಂಡಿಗಳನ್ನು ನೀಡಿ ಸ್ವಾಗತಿಸುತ್ತಿದ್ದು, ಎಲ್ಲರ ಗಮನ ಸೆಳೆದಿದೆ.

ಈ ವಿಶೇಷ ರೋಬೋಟ್ ಅನ್ನು ಇದೇ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಇದರ ಧ್ವನಿ ಸಂಸ್ಕರಣೆ (ವಾಯ್ಸ್ ಪ್ರೊಸೆಸಿಂಗ್) ಮತ್ತು ರಿಮೋಟ್ ಕಂಟ್ರೋಲ್ (ಆರ್.ಸಿ ಕಂಟ್ರೋಲ್) ಮಾದರಿಯನ್ನು ಅವರೇ ಅಭಿವೃದ್ಧಿಪಡಿಸಿದ್ದು, ಮತದಾರರೊಂದಿಗೆ ಸಂವಹನ ನಡೆಸಲು ಇದು ಸಹಕಾರಿಯಾಗಿದೆ.

ಸೀರೆ ಧರಿಸಿ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿರುವ 'ಟೀನಾ' ರೋಬೋಟ್, ಮತಗಟ್ಟೆಗೆ ಬರುವ ಮತದಾರರಿಗೆ ಕೈಮುಗಿದು ಸ್ವಾಗತ ಕೋರುತ್ತಿದೆ. ಅಷ್ಟೇ ಅಲ್ಲದೆ, ಚಾಕೊಲೇಟ್ ಮತ್ತು ಸಿಹಿ ತಿಂಡಿಗಳನ್ನು ನೀಡಿ ಮತದಾರರಲ್ಲಿ ಸಂಭ್ರಮ ಹೆಚ್ಚಿಸುತ್ತಿದೆ.

"ಸಾಲಿನಲ್ಲಿ ನಿಂತು ಮತ ಚಲಾಯಿಸಿ, 100% ಮತದಾನ ಮಾಡಿ" ಎಂದು ಧ್ವನಿ ಸಂದೇಶದ ಮೂಲಕ 'ಟೀನಾ' ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈ ವಿಶಿಷ್ಟ ಪ್ರಯತ್ನದಿಂದ ಯುವ ಮತದಾರರು ಹಾಗೂ ಸಾರ್ವಜನಿಕರು ರೋಬೋಟ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದು, ಮತಗಟ್ಟೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಚುನಾವಣೆಯಂತಹ ಗಂಭೀರ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿ ಮತದಾರರನ್ನು ಸೆಳೆಯುತ್ತಿರುವ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Nirmala Aralikatti
PublicNext

PublicNext

23/04/2026 04:59 pm

Cinque Terre

15.32 K

Cinque Terre

0