ಹಾನಗಲ್ : ಇತ್ತೀಚಿಗೆ ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಔಷಧಗಳು, ವೈದ್ಯಕೀಯ ಸಲಕರಣೆಗಳು ಹಾಗೂ ವಿವಿಧ ಸಾಮಗ್ರಿಗಳು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಶ್ರೀನಿವಾಸ ಮಾನೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗ್ನಿ ಅವಘಡಕ್ಕೀಡಾದ ಔಷಧ ದಾಸ್ತಾನು ಕೊಠಡಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದರು. ಔಷಧ ದಾಸ್ತಾನು ಕೊಠಡಿಯ ಪಕ್ಕದಲ್ಲಿರುವ ಡಯಾಲಿಸಸ್ ಕೊಠಡಿಯನ್ನೂ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಾನೆ, ಆಕಸ್ಮಿಕ ಅಗ್ನಿ ಅವಘಡದಿಂದ ಔಷಧ ದಾಸ್ತಾನು ಪೂರ್ಣ ಸುಟ್ಟು ಹೋಗಿದೆ. ಕೆಲ ವೈದ್ಯಕೀಯ ಉಪಕರಣಗಳಿಗೂ ಹಾನಿಯಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಸಮಯಪ್ರಜ್ಞೆ ಮೆರೆದು ರೋಗಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡಲಾಗುತ್ತಿದೆ.
ಇನ್ನೂ ಬ್ಯಾಡಗಿ, ಹಾವೇರಿ, ಶಿಗ್ಗಾಂವಿ ಮತ್ತು ಹುಬ್ಬಳ್ಳಿಯಲ್ಲಿ ರೋಗಿಗಳಿಗೆ ಡಯಾಲಿಸಿಸ್‌ಗೆ ವ್ಯವಸ್ಥೆ ಮಾಡಲಾಗಿದೆ, ಬುಧವಾರದಿಂದ ತುರ್ತು ಚಿಕಿತ್ಸೆ, ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.
ಒಂದು ವಾರದ ನಂತರ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಅವಘಡದಲ್ಲಿ ಔಷಧ ದಾಸ್ತಾನು ಹಾಳಾಗಿರುವ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತರ ಗಮನ ಸೆಳೆಯುವುದಾಗಿ ಎಂದು ತಿಳಿಸಿದರು.
ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್
PublicNext
29/04/2026 09:46 am
LOADING...