ಬೆಂಗಳೂರು: ಹಳೆಯ ದ್ವೇಷದ ಕಾರಣಕ್ಕೆ ಸ್ನೇಹಿತನ ರೂಮಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಹಲ್ಲೆಯ ಸಂಪೂರ್ಣ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಮ್ಮನ್ನು ಕಂಡರೆ ಇಡೀ ಏರಿಯಾನೇ ಭಯಪಡಬೇಕುಎಂದು ಹೇಳುತ್ತಾ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿರುವ ಆರೋಪಿಗಳು, ಪ್ರಶಾಂತ್ ಎಂಬ ಯುವಕನನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಘಟನೆ ಕಳೆದ ಏಪ್ರೀಲ್ 26ರ ರಾತ್ರಿ ನಡೆದಿದೆ.
ಸುಂಕದಕಟ್ಟೆಯಲ್ಲಿ ವಾಸವಿದ್ದ 32 ವರ್ಷದ ಪ್ರಶಾಂತ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ದರ್ಶನ್ ಮತ್ತು ಚಂದನ್ ಈ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಇಡೀ ರಾತ್ರಿ ಪ್ರಶಾಂತ್ ಮೇಲೆ ಲಾಂಗು ಮಚ್ಚುಗಳಿಂದ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಪ್ರಶಾಂತ್ ಕೈಮುಗಿದು ಬೇಡಿಕೊಂಡರೂ ಬಿಡದೆ ಸತತವಾಗಿ ಹಲ್ಲೆ ಮಾಡಿದ್ದಾರೆ. ಮೈತುಂಬಾ ರಕ್ತ ಸುರಿಯುತ್ತಿದ್ದರೂ ಪಾಪಿ ಸ್ನೇಹಿತರು ಅಯ್ಯೋ ಎನ್ನದೆ ತಮ್ಮ ಕ್ರೌರ್ಯ ಮುಂದುವರಿಸಿದ್ದಾರೆ.
ಹಲ್ಲೆಗೊಳಗಾದ ಪ್ರಶಾಂತ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಲ್ಲಿ ಸೋಪ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ದರ್ಶನ್ ಮತ್ತು ಚಂದನ್ ಪ್ರಶಾಂತ್‌ನ ಬಾಲ್ಯದ ಸ್ನೇಹಿತರು. ಚಿಕ್ಕ ವಯಸ್ಸಿನಿಂದಲೂ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಪ್ರಶಾಂತ್ ಮತ್ತು ಆರೋಪಿಗಳ ನಡುವೆ ಸಣ್ಣಪುಟ್ಟ ಜಗಳಗಳು ಉಂಟಾಗಿದ್ದವು. ಇದೇ ಹಳೆಯ ದ್ವೇಷವೇ ಈ ಮಾರಣಾಂತಿಕ ಹಲ್ಲೆಗೆ ಪ್ರಮುಖ ಕಾರಣ ಎಂದು ಪ್ರಶಾಂತ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಶಾಂತ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ಪತ್ನಿ ಬಾಣಂತಿ ತನಕ್ಕೆ ತವರು ಮನೆಗೆ ಹೋಗಿದ್ದರು. ಪತ್ನಿ ಇಲ್ಲದ ವೇಳೆ, ಅಕ್ಟೋಬರ್ 26ರ ರಾತ್ರಿ ಆರೋಪಿಗಳು ಪ್ರಶಾಂತ್ ಮೇಲೆ ಹಲ್ಲೆ ನಡೆಸಿ, ಕೊಠಡಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದ ನಂತರ, ಈ ವಿಡಿಯೋವನ್ನು ಮತ್ತೊಬ್ಬ ಸ್ನೇಹಿತನಿಗೆ ಕಳುಹಿಸಿದ್ದಾರೆ. ಮರುದಿನ ಬೆಳಗ್ಗೆ ಪ್ರಶಾಂತ್ ಬಾಡಿಗೆ ಮನೆಯ ಮಾಲೀಕರು ನೋಡಿದಾಗ, ಪ್ರಶಾಂತ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಪ್ರಶಾಂತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ದರ್ಶನ್ ಮತ್ತು ಚಂದನ್ ನ ಬಂಧಿಸಿದ್ದಾರೆ.
PublicNext
30/04/2026 04:49 pm