ಮೈಸೂರು: ಸಿಎಂ ಆಪ್ತನ ಘೋರ ಕೃತ್ಯ.! ಪ್ರೀತಿ ನಾಟಕವಾಡಿ ದೈಹಿಕ ಸಂಬಂಧ - ಯುವತಿಗೆ ವಿಷವಿಟ್ಟು ಕೊಲೆಗೆ ಯತ್ನ!
ಮೈಸೂರು: ಟಿ. ನರಸೀಪುರದ ಮಾಜಿ ನಗರಸಭಾಧ್ಯಕ್ಷ ಹಾಗೂ ಹಾಲಿ ಕೌನ್ಸಿಲರ್ ಮದನ್ ರಾಜ್ ವಿರುದ್ಧ ಯುವತಿಯೊಬ್ಬರಿಗೆ ಪ್ರೀತಿಸಿದಂತೆ ನಟಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಮತ್ತೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೆ, ಪ್ರೇಮ ನಾಟಕದ ನಂತರ ಆ ಯುವತಿಗೆ ವಿಷ ನೀಡಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪವೂ ಅವರ ಮೇಲಿದೆ. ಈ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನಿಕಟವರ್ತಿ ಎನಿಸಿಕೊಂಡಿರುವ ಮದನ್ ರಾಜ್ ಅವರ ಕರ್ಮಕಾಂಡವನ್ನು ಬಯಲಿಗೆಳೆದಿದೆ.
ಆರೋಪಿ ಮದನ್ ರಾಜ್ ತಲೆಮರೆಸು
ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಮದನ್ ರಾಜ್ ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾಗಿರುವ ಮದನ್ ರಾಜ್, ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ತೆಗೆಸಿಕೊಂಡಿರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಪ್ರಭಾವಿ ವ್ಯಕ್ತಿ, ಸರ್ಕಾರಿ ಹುದ್ದೆಯಲ್ಲಿರುವ ಯುವತಿಯೊಬ್ಬರಿಗೆ ಪ್ರೀತಿಯ ನಾಟಕವಾಡಿದ್ದಾರೆ. ತೊನ್ನಿನ ಚರ್ಮ ರೋಗದಿಂದ ಬಳಲುತ್ತಿದ್ದ ಆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾರೆ.
ವಿಷ ಸೇವನೆಗೆ ಪ್ರೇರಣೆ ಮತ್ತು ವಂಚನೆ
ಮದುವೆಗೆ ಮನೆಯವರ ವಿರೋಧವಿದೆ, ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಂಡಂತೆ ನಾಟಕವಾಡಿದರೆ ಅವರು ಒಪ್ಪಿಕೊಳ್ಳುತ್ತಾರೆ ಎಂದು ಯುವತಿಯನ್ನು ನಂಬಿಸಿ ವಿಷ ಸೇವಿಸಲು ಪ್ರೇರೇಪಿಸಿದ್ದಾರೆ. ಯುವತಿ ವಿಷ ಸೇವಿಸಿದ ನಂತರ ಮದನ್ ರಾಜ್ ಅವರ ನಿಜ ಬಣ್ಣ ಬಯಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಇದಾದ ಕೆಲವೇ ದಿನಗಳಲ್ಲಿ ಮಹಿಳಾ ಅಧಿಕಾರಿಯೊಬ್ಬರ ಜೊತೆ ಮದನ್ ರಾಜ್‌ಗೆ ನಿಶ್ಚಿತಾರ್ಥ ನಡೆದಿದೆ.
ಯುವತಿಯ ದೂರು, ಸಾಕ್ಷ್ಯ ನಾಶಕ್ಕೆ ಯತ್ನ
ತಾನು ಮೋಸ ಹೋಗಿರುವುದನ್ನು ಅರಿತ ಯುವತಿ, ಮದನ್ ರಾಜ್ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮದನ್ ರಾಜ್ ಜೊತೆ ವಸತಿಗೃಹದಲ್ಲಿ ಆಪ್ತವಾಗಿ ಕಳೆದ ಸನ್ನಿವೇಶಗಳನ್ನು ಯುವತಿ ತನ್ನ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದಳು. ಆದರೆ, ವಂಚನೆ ಸಂಚು ನಡೆಸಿದ ಮದನ್ ರಾಜ್, ತನ್ನ ಸ್ನೇಹಿತರ ಸಹಾಯದಿಂದ ಯುವತಿಯ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮದನ್ ರಾಜ್ ಅವರ ಕುತಂತ್ರವನ್ನು ಅರಿತ ಪ್ರೇಯಸಿ, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
PublicNext
01/05/2026 10:49 am