ಮಂಗಳೂರು: ಸೋಶಿಯಲ್ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಸೋಶಿಯಲ್ ಮೀಡಿಯಾ ಇದೀಗ ತುಳುನಾಡಿನಲ್ಲಿ ಕುಟುಂಬದ ಸಂಪರ್ಕ ಕಡಿದುಕೊಂಡ ತಮಿಳುನಾಡಿನ ಮೀನುಗಾರನನ್ನು ಮತ್ತೆ ಕುಟುಂಬದೊಂದಿಗೆ ಬೆಸೆಯುವಂತೆ ಮಾಡಿದೆ.
ಎ.19ರಂದು ಮಾನಸಿಕವಾಗಿ ಅಸ್ವಸ್ಥನಂತಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಮನವಿ ಮೇರೆಗೆ ಕೊರಿನ್ ರಸ್ಕಿನಾರವರು ಮರೋಳಿಯಲ್ಲಿರುವ ತಮ್ಮ ವೈಟ್‌ಹೌಸ್ ಸಂಸ್ಥೆಗೆ ಕರೆತರುತ್ತಾರೆ ಮಾನಸಿಕ ಸ್ವಸ್ಥ್ಯ ಕಳೆದುಕೊಂಡಿದ್ದ ಆತ ಜೋರಾಗಿ ಬೊಬ್ಬೆ ಹೊಡೆದು ತಕರಾರು ಮಾಡುತ್ತಿದ್ದ. ತಮಿಳು ಭಾಷೆಯಲ್ಲಿ ಏನೋ ಹೇಳುತ್ತಿದ್ದ. ಇವರಿಗೆ ಅರ್ಥ ಆಗುತ್ತಿರಲಿಲ್ಲ. ಅತಿಯಾದ ಮದ್ಯವ್ಯಸನದಿಂದ ಲೋಕದ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದ. ಹೇಗೋ ಸಂಭಾಳಿಸಿ ಆತನಿಗೆ ಶುಶ್ರೂಷೆ ಮಾಡಿದ ಬಳಿಕ ಸ್ಥಿಮಿತ ಮರಳಿ ಬಂದು ಮನೆಯ ನೆನಪು ಮಾಡುತ್ತಿದ್ದ. 'ತಾನು ರಾಮೇಶ್ವರದವನು. ಬೋಟ್‌ನಲ್ಲಿ ಆಳಸಮುದ್ರ ಮೀನುಗಾರಿಕೆ ಮಾಡಲು ಬಂದಿದ್ದೆ. ಆಗ ಯಾರೋ ತನ್ನನ್ನು ಕಟ್ಟಿ ಹಾಕಿದ್ದಾರೆ. ನೀರಿನಲ್ಲಿ ಮುಳುಗಿಸಿದ್ದಾರೆ' ಎಂದು ಹೇಳಿದ್ದಾನೆ. ಅದರಂತೆ ಆತನ ಕೈಯನ್ನು ಹಗ್ಗದಲ್ಲಿ ಕಟ್ಟಿದ್ದ ಗಾಯದ ಕುರುಹು ಇತ್ತು. ಕೈಯಲ್ಲಿ ಊತ ಎದ್ದಿತ್ತು.
ಬೈಟ್: ಕೊರಿನ್ ರಸ್ಕಿನಾ- ವೈಟ್‌ಹೌಸ್ ಸಂಸ್ಥೆಯ ಸಂಸ್ಥಾಪಕಿ
ಆತನ ಮನೆಯವರ ಸಂಪರ್ಕ ಮಾಡಲು ಫೋನ್ ಎಲ್ಲೋ ಕಳೆದುಕೊಂಡಿದ್ದ. ಕುಟುಂಬದವರ, ಸ್ನೇಹಿತರ ಫೋನ್ ನಂಬರ್ ಆತನಿಗೆ ನೆನಪಿರಲಿಲ್ಲ. ಈ ವೇಳೆ ವೈಟ್‌ಹೌಸ್ ಸಂಸ್ಥೆಯ ನರ್ಸ್‌ಗಳು ಆತನಿಗೆ ಆಪ್ತಸಮಾಲೋಚನೆ ಮಾಡುವಾಗ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದ ಎಂದು ಹೇಳಿದ್ದ. ಅದೃಷ್ಟವಶಾತ್ ಇನ್‌ಸ್ಟಾಗ್ರಾಂ ಪಾಸ್‌ವರ್ಡ್ ಆತನಿಗೆ ನೆನಪಿತ್ತು. ಅದರಂತೆ ಆತನೊಂದಿಗೆ ಮೀನುಗಾರಿಕೆ ಮಾಡುತ್ತಿದ್ದ ಸ್ನೇಹಿತನನ್ನು ಸಂಪರ್ಕಿಸಿ ಮಾತನಾಡಲಾಯಿತು. ಆಗ ಈತನ ಹೆಸರು ಆರೋಕ್ಯ ವೆಲೆಂಟೈನ್ ಎಂದು ತಿಳಿದು ಬಂದಿದೆ. ಇವನು ಪತ್ತೆಯಾದ ವಿಚಾರ ತಿಳಿದು ತಕ್ಷಣ ಆತನ ಭಾವ ಹಾಗೂ ಚಿಕ್ಕಪ್ಪ ಮಂಗಳೂರಿಗೆ ಬಂದಿದ್ದಾರೆ.
ಅವರು ಬಂದ ಬಳಿಕ ಈತ ನಾಪತ್ತೆಯಾಗಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿದೆ. ಮೀನುಗಾರಿಕೆಗೆಂದು ತಮಿಳುನಾಡಿನಿಂದ ಬಂದ ಈತ ತನ್ನ ಸಂಗಡಿಗರೊಂದಿಗೆ ಸೇರಿ ಕಂಠಪೂರ್ತಿ ಕುಡಿದಿದ್ದಾನೆ. ನಶೆಯಲ್ಲಿ ತಾನು ಸಮುದ್ರಕ್ಕೆ ಹಾರುತ್ತೇನೆ ಎಂದಿದ್ದಾನಂತೆ. ಇದರಿಂದ ಬೆದರಿದ ಅವರು ಈತನ ಕೈಕಾಲು ಕಟ್ಟಿ ಬೋಟ್‌ನಲ್ಲಿ ಐಸ್ ಇಡುವಲ್ಲಿ ಇಟ್ಟಿದ್ದಾರೆ. ಆದರೆ ಅದು ಹೇಗೋ ಈತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ವಿಚಾರ ತಿಳಿದು ಮನೆಮಂದಿ ರಾಮೇಶ್ವರದಿಂದ ಬಂದು ಮಂಗಳೂರಿನಲ್ಲಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಆರೋಕ್ಯ ವೆಲೆಂಟೈನ್ ಎಲ್ಲೂ ಪತ್ತೆಯಾಗದೆ ಮರಳಿ ಊರಿಗೆ ತೆರಳಿದ್ದಾರೆ. ಇದೀಗ ಆತ ಪತ್ತೆಯಾಗಿದ್ದಾನೆಂದು ಮರಳಿ ಮಂಗಳೂರಿಗೆ ಬಂದು ಮನಮಗನನ್ನು ಕರೆದುಕೊಂಡು ಸಂತೋಷದಿಂದ ಊರಿನತ್ತ ಪ್ರಯಾಣಿಸಿದ್ದಾರೆ.
PublicNext
01/05/2026 04:34 pm