ನವದೆಹಲಿ: ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ ₹4 ರಿಂದ ₹5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ವಾಹನ ಸವಾರರಿಗಷ್ಟೇ ಅಲ್ಲದೆ, ಗೃಹಿಣಿಯರಿಗೂ ಶಾಕ್ ಕಾದಿದ್ದು, ಮನೆಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹50 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಮೇ 1, 2026 ರಂದು ರಾಜ್ಯ ಚುನಾವಣೆಗಳು ಮುಕ್ತಾಯಗೊಂಡ ತಕ್ಷಣವೇ ಈ ಸುದ್ದಿಯು ಹೊರಬಿದ್ದಿದೆ. ಇದು ಸಾಮಾಜಿಕ ಜಾಲತಾಣ 'X' ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, "ಚುನಾವಣೆಗಾಗಿ ಸರ್ಕಾರವು ಇಷ್ಟು ದಿನ ಬೆಲೆ ಏರಿಕೆಯನ್ನು ತಡೆಹಿಡಿದಿತ್ತೇ?" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಲೇ ಇದೆ. ಅಂತರಾಷ್ಟ್ರೀಯ ಬೆಲೆ ಏರಿಕೆಯಾದರೂ ದೇಶದಲ್ಲಿ ಬೆಲೆ ಹೆಚ್ಚಿಸದ ಕಾರಣ ತೈಲ ಮಾರುಕಟ್ಟೆ ಕಂಪನಿಗಳು (OMCs)ಭಾರಿ ನಷ್ಟ ಅನುಭವಿಸುತ್ತಿವೆ. ನಷ್ಟವನ್ನು ಸರಿದೂಗಿಸಲು ಬೆಲೆ ಹೊಂದಾಣಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಬೆಲೆ ಏರಿಕೆಯ ಕುರಿತು ವರದಿಗಳು ಹರಿದಾಡುತ್ತಿದ್ದರೂ, ಸರ್ಕಾರವು ಈವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಹಿಂದೆ ಇಂತಹ ಪ್ರಮುಖ ಏರಿಕೆಗಳನ್ನು ಸರ್ಕಾರ ನಿರಾಕರಿಸುತ್ತಾ ಬಂದಿತ್ತಾದರೂ, ಈಗಿನ ಜಾಗತಿಕ ಪರಿಸ್ಥಿತಿಯು ಬೆಲೆ ಏರಿಕೆಯತ್ತ ಬೆರಳು ಮಾಡಿ ತೋರಿಸುತ್ತಿದೆ.
ಒಟ್ಟಿನಲ್ಲಿ, ಬಿಸಿಲ ಬೇಗೆಯ ನಡುವೆ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದಂತೂ ಖಚಿತ ಎನ್ನಲಾಗುತ್ತಿದೆ.
PublicNext
01/05/2026 10:26 pm