ಕೆಎಸ್ ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕವೊಂದನ್ನು ಗೋಳಗುಮ್ಮಟ ನಗರಿ ವಿಜಯಪುರದಲ್ಲಿ ಸ್ಥಾಪಿಸಲು ಸರ್ಕಾರ 229 ಕೋಟಿ ರೂ. ಮಂಜೂರು ಮಾಡಿದ್ದು, ಸಚಿವ ಸಂಪುಟದಿಂದಲೂ ಅನುಮೋದನೆ ದೊರೆತಿದೆ. ಈ ಮಹತ್ವದ ನಿರ್ಧಾರವು ಬಿಸಿಲ ನಗರಿ ವಿಜಯಪುರದ ಜನತೆಯಲ್ಲಿ ಸಂತಸ ಮೂಡಿಸಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ ಡಿಎಲ್) ಘಟಕದ ಸ್ಥಾಪನೆಯು ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ನಿರುದ್ಯೋಗಿಗಳಿಗೆ ಆಶಾಕಿರಣ
ವಿಜಯಪುರ ಜಿಲ್ಲೆ ಹಲವು ವರ್ಷಗಳಿಂದ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಇಲ್ಲಿನ ನೂರಾರು ಯುವಜನರು ಉದ್ಯೋಗವನ್ನು ಅರಸಿ ದೂರದ ಗೋವಾ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ, ಕೆಎಸ್ ಡಿಎಲ್‌ನ ಈ ನೂತನ ಘಟಕವು ಜಿಲ್ಲೆಯ ನಿರುದ್ಯೋಗಿಗಳಿಗೆ ಹೊಸ ಆಶಾಕಿರಣವಾಗಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಅವರ ಬದುಕಿಗೆ ಆಧಾರವಾಗಲಿದೆ. ಇದು ಸ್ಥಳೀಯರಿಗೆ ಉದ್ಯೋಗ ನೀಡುವ ಜೊತೆಗೆ ವಲಸೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.
ಸಚಿವರ ಪ್ರಯತ್ನಕ್ಕೆ ಫಲ
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಕೆಎಸ್ ಡಿಎಲ್ ಅಧ್ಯಕ್ಷರು ಮತ್ತು ಮುದ್ದೇಬಿಹಾಳ ಶಾಸಕರೂ ಆದ ಅಪ್ಪಾಜಿ ನಾಡಗೌಡ ಅವರ ಅವಿರತ ಪ್ರಯತ್ನಗಳ ಫಲವಾಗಿ ಈ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ವಿಜಯಪುರದಲ್ಲಿ ತಲೆ ಎತ್ತಲು ಸಾಧ್ಯವಾಗಿದೆ. ಇವರ ನಾಯಕತ್ವದಲ್ಲಿ, ಕೆಎಸ್ ಡಿಎಲ್ ಪ್ರಸಕ್ತ 2026-27ನೇ ಆರ್ಥಿಕ ವರ್ಷದಲ್ಲಿ 2016 ಕೋಟಿ ರೂ.ಗಳ ದಾಖಲೆಯ ವಹಿವಾಟು ನಡೆಸಿ, 507 ಕೋಟಿ ರೂ.ಗಳ ಲಾಭ ಗಳಿಸಿದೆ. ಈ ಸಾಧನೆ ಮತ್ತು ವಿಜಯಪುರದಲ್ಲಿ ಘಟಕ ಸ್ಥಾಪನೆಯ ನಿರ್ಧಾರಕ್ಕೆ ಈ ಇಬ್ಬರು ಸಚಿವರ ಕೊಡುಗೆ ಮಹತ್ವದ್ದು ಎಂದು ಹೇಳಿದರೆ ಅತಿಶಯೋಕ್ತಿಯಾಗದು.
PublicNext
02/05/2026 04:10 pm