ಮೂಡಿಗೆರೆ: ಜಮೀನು ವಿಚಾರದ ದ್ವೇಷಕ್ಕೆ ಬೆಳೆದು ನಿಂತಿದ್ದ ಕಾಫಿ ಗಿಡಗಳನ್ನು ನಾಶಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.
ಆಕಾಶ್ ಎಂಬುವವರು ಬಣಕಲ್ ಠಾಣೆಗೆ ದೂರು ನೀಡಿದ್ದು, 40 ವರ್ಷಗಳ ಹಳೆಯದಾದ 67 ಕಾಫಿ ಗಿಡಗಳನ್ನು ಅಕ್ರಮವಾಗಿ ಕಡಿದುರುಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಗಿಡಗಳನ್ನು ಕಡಿಯುವ ಶಬ್ದ ಕೇಳಿ ಆಕಾಶ್ ತೋಟಕ್ಕೆ ಹೋದಾಗ, ನೆರೆಯ ಜಮೀನಿನ ಮಾಲೀಕ ರಾಜೇಶ್, ಅವರ ಪತ್ನಿ ರೇಷ್ಮಾ ಮತ್ತು ಐದಾರು ಜನ ಕೂಲಿ ಕಾರ್ಮಿಕರು ಅತಿಕ್ರಮವಾಗಿ ಪ್ರವೇಶಿಸಿ ಗಿಡಗಳನ್ನು ನೆಲಸಮ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಕಟಾವಿಗೆ ಬಂದಿದ್ದ ಕಾಫಿ ಗಿಡಗಳಿಂದ ವಾರ್ಷಿಕ ಸುಮಾರು 70 ರಿಂದ 80 ಸಾವಿರ ರೂಪಾಯಿ ಆದಾಯ ಬರುತ್ತಿದ್ದು, ಈಗ ಗಿಡಗಳ ನಾಶದಿಂದ ಅಂದಾಜು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
PublicNext
02/05/2026 10:41 am
LOADING...