ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಅವರು ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಇಬ್ಬರು ವಿದ್ಯಾರ್ಥಿಗಳಾದ ಆಲಮೇಲದ ವಿದ್ಯಾರ್ಥಿ ಉದಯಕುಮಾರ ನಾರಾಯಣಕರ ಮತ್ತು ರತ್ನಾಪುರದ ಮನೋಹರ ಹರಗೆ ಅವರ ಎಂ.ಬಿ.ಬಿ.ಎಸ್ ಕೋರ್ಸಿನ ಬೋಧನಾ ಶುಲ್ಕ, ಊಟ ಮತ್ತು ವಸತಿ(ಹಾಸ್ಟೆಲ್ ಮತ್ತು ಮೆಸ್)ಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ಸಚಿವರು ವಿತರಿಸಿದರು.
ಆಲಮೇಲದ ವಿದ್ಯಾರ್ಥಿ ಉದಯಕುಮಾರ ನಾರಾಯಣಕರ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಗೆ ಎಂ.ಬಿ.ಬಿ.ಎಸ್ ಕೋರ್ಸಿಗೆ ಅಗತ್ಯವಾಗಿರುವ ರೂ.1 ಲಕ್ಷ 88, ಸಾವಿರದ 850 ಮೊತ್ತದ ಚೆಕ್ ನ್ನು ಸಚಿವರು ವಿತರಿಸಿದರು.
ಎರಡನೇ ವಿದ್ಯಾರ್ಥಿ ತಿಕೋಟಾ ತಾಲೂಕಿನ ರತ್ನಾಪುರದ ಮನೋಹರ ಹರಗೆ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಐ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಗೆ ಬೇಕಾದ ರೂ. 1 ಲಕ್ಷ 28 ಸಾವಿರದ 400 ಮೊತ್ತದ ಚೆಕ್ ನ್ನು ಸಚಿವರು ವಿತರಿಸಿದರು.
ಆರ್ಥಿಕ ನೆರವಿನ ಚೆಕ್ ಪಡೆದ ವಿದ್ಯಾರ್ಥಿ ಸಚಿವರ ಸಹಾಯಕ್ಕೆ ಸಂತಸ ವ್ಯಕ್ತಪಡಿಸಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ಮತ್ತು ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
PublicNext
02/05/2026 02:17 pm
LOADING...