ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಈಗಾಗಲೇ 40°C ಗಡಿ ದಾಟಿದೆ. ಇಂತಹ ಸುಡುವ ಬಿಸಿಲಿನಲ್ಲಿ ರಸ್ತೆಯ ಮಧ್ಯೆ ನಿಂತು ಸಂಚಾರ ನಿಯಂತ್ರಿಸುವ ಪೊಲೀಸರ ಸ್ಥಿತಿ ನಿಜಕ್ಕೂ ಶೋಚನೀಯ. ಆದರೆ, ಇದಕ್ಕೊಂದು ಪರಿಹಾರ ಕಂಡುಕೊಂಡಿರುವ ಬೆಳಗಾವಿ ಸಂಚಾರ ಪೊಲೀಸರೊಬ್ಬರ 'ಹೈಟೆಕ್' ಉಪಾಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸಂಚಾರ ಪೊಲೀಸರ ಬಿಸಿಲಿನ ತಾಪ ಕಡಿಮೆ ಮಾಡಲು ತಮ್ಮ ಟೋಪಿಗೆ 'ಸೋಲಾರ್ ಫ್ಯಾನ್' ಅಳವಡಿಸಿಕೊಂಡಿರುವ ಈ ಹೊಸ ಪರಿಕಲ್ಪನೆ ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಹೌದು ಬೆಳಗಾವಿಯ ಸಂಚಾರ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ತಮ್ಮ ಕರ್ತವ್ಯದ ಅಧಿಕೃತ ಟೋಪಿಗೆ ಸಣ್ಣದೊಂದು ಸೌರಶಕ್ತಿ ಚಾಲಿತ ಫ್ಯಾನ್ ಅಳವಡಿಸಿಕೊಂಡಿದ್ದಾರೆ. ಈ ಟೋಪಿಯ ಮೇಲ್ಭಾಗದಲ್ಲಿ ಚಿಕ್ಕ ಸೋಲಾರ್ ಪ್ಯಾನಲ್ ಇದ್ದು, ಸೂರ್ಯನ ಬೆಳಕು ಬಿದ್ದ ತಕ್ಷಣ ಟೋಪಿಯ ಮುಂಭಾಗದಲ್ಲಿರುವ ಫ್ಯಾನ್ ತಿರುಗಲು ಆರಂಭಿಸುತ್ತದೆ. ಇದು ನೇರವಾಗಿ ಕಾನ್ಸ್‌ಟೇಬಲ್ ಮುಖಕ್ಕೆ ತಂಪು ಗಾಳಿಯನ್ನು ನೀಡುವ ಮೂಲಕ ಬೆವರಿನಿಂದ ಮುಖ ಒದ್ದೆಯಾಗುವುದನ್ನು ತಡೆಯುತ್ತದೆ ಮತ್ತು ಬಿಸಿಲಿನ ತಾಪವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಈ 'ಸೋಲಾರ್ ಟೋಪಿ' ಧರಿಸಿದ ಪೇದೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರ ಈ ಸಮಯಪ್ರಜ್ಞೆ ಮತ್ತು ನವೀನ ಆಲೋಚನೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿ ಪೊಲೀಸರ ಈ ಮಾದರಿಯನ್ನು ಕಂಡು, ದಿನವಿಡೀ ಬಿಸಿಲಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು, ನಿರ್ಮಾಣ ಕಾರ್ಮಿಕರು ಮತ್ತು ಇತರ ಹೊರಾಂಗಣ ಕೆಲಸಗಾರರಿಗೂ ಸರ್ಕಾರ ಇಂತಹ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬಲವಾದ ಆಗ್ರಹ ಕೇಳಿಬಂದಿದೆ.
"ಬಿಸಿಲಿನಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟದ ಕೆಲಸ. ಈ ಸಣ್ಣ ಫ್ಯಾನ್ ನಮಗೆ ಸ್ವಲ್ಪ ನೆಮ್ಮದಿ ನೀಡುತ್ತದೆ. ಇಂತಹ ಪ್ರಯೋಗಗಳು ಎಲ್ಲರಿಗೂ ತಲುಪಿದರೆ ಉತ್ತಮ," ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಕರ್ತವ್ಯ ನಿರತ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಂತಹ 'ಕೂಲಿಂಗ್' ಉಪಕರಣಗಳು ಈಗ ಅನಿವಾರ್ಯವಾಗುತ್ತಿವೆ. ಬೆಳಗಾವಿ ಕಾನ್ಸ್‌ಟೇಬಲ್ ಈ ಸರಳ ಆದರೆ ಪರಿಣಾಮಕಾರಿ ಐಡಿಯಾವು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಪ್ರೇರಣೆಯಾಗಿದೆ.
PublicNext
02/05/2026 02:37 pm