ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಕೆಂಭಾವಿ ಖಾಸಗಿ ಆಸ್ಪತ್ರೆಗಳ ಮೇಲೆ ಡಿಹೆಚ್‌ಒ ದಿಢೀರ್ ದಾಳಿ - ಅಕ್ರಮ ಚಿಕಿತ್ಸೆ ಬಯಲು!

ಯಾದಗಿರಿ: ಕೆಂಭಾವಿ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್‌ಒ) ಡಾ. ಮಹೇಶ್ ಬಿರಾದಾರ ಅವರು ಶುಕ್ರವಾರ ದಿಢೀರ್ ದಾಳಿ ನಡೆಸಿದರು. ಈ ಅನಿರೀಕ್ಷಿತ ತಪಾಸಣೆಯಿಂದ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿಯಲ್ಲಿನ ಅಕ್ರಮಗಳು ಬಯಲಿಗೆ ಬಂದಿವೆ.

ಗಂಭೀರ ಉಲ್ಲಂಘನೆಗಳು ಪತ್ತೆ, ನೋಟಿಸ್ ಜಾರಿ

ದಾಳಿಯ ವೇಳೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯ ಉಲ್ಲಂಘನೆಗಳು ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಪಟ್ಟಣದ ಮೂರು ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಿ, ದಂಡವನ್ನೂ ವಿಧಿಸಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ, ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರು ಅಲೋಪಥಿಕ್ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದ್ದು, ಇದು ನನಗೆ ಆಘಾತ ತಂದಿದೆ ಎಂದು ಡಿಹೆಚ್‌ಒ ಡಾ. ಮಹೇಶ್ ಬಿರಾದಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಅವರು ಮುಂದುವರೆದು, "ರೋಗಿಗಳಿಗೆ ನೀಡಬೇಕಾದ ಚಿಕಿತ್ಸೆ ಆಯುರ್ವೇದ ಮತ್ತು ಹೋಮಿಯೋಪತಿ ವಿಧಾನದಲ್ಲಿರಬೇಕು. ಆದರೆ, ಇಲ್ಲಿನ ವೈದ್ಯರು ಹಾಸಿಗೆಗಳನ್ನು ಹಾಕಿ, ಎಕ್ಸ್-ರೇ ಯಂತ್ರಗಳನ್ನು ಬಳಸಿ ಅಲೋಪಥಿಕ್ ಚಿಕಿತ್ಸೆ ನೀಡುತ್ತಿರುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದನ್ನು ಕೂಡಲೇ ನಿಲ್ಲಿಸಲು ಸೂಚನೆ ನೀಡಲಾಗಿದ್ದು, ಕೆಪಿಎಂಇ ಕಾಯಿದೆಯನ್ವಯ ಮುಂದಿನ ಕ್ರಮವಾಗಿ ನೋಟಿಸ್ ಜಾರಿ ಮಾಡಲಾಗುವುದು" ಎಂದು ಸ್ಪಷ್ಟಪಡಿಸಿದರು.

ಕಠಿಣ ಎಚ್ಚರಿಕೆ ಹಾಗೂ ಸಾರ್ವಜನಿಕರಿಗೆ ಮನವಿ

"ನೀವು ಯಾವ ವೈದ್ಯಕೀಯ ಪದ್ಧತಿಯಲ್ಲಿ ಅರ್ಹತೆ ಪಡೆದಿದ್ದೀರೋ, ಅದರಲ್ಲಿಯೇ ಚಿಕಿತ್ಸೆ ನೀಡಿ. ಅಲೋಪಥಿಕ್ ಚಿಕಿತ್ಸೆಯನ್ನು ನಿಲ್ಲಿಸಿ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಸೂಚನೆಯನ್ನು ಉಲ್ಲಂಘಿಸಿ ಮತ್ತೆ ಇದೇ ರೀತಿ ಮುಂದುವರೆದರೆ, ಕೆಪಿಎಂಇ ಕಾಯ್ದೆ ಉಲ್ಲಂಘನೆಯ ಆರೋಪದ ಮೇಲೆ ಅಂತಹ ಆಸ್ಪತ್ರೆಗಳಿಗೆ ಬೀಗ ಹಾಕುವುದಾಗಿ ಡಿಹೆಚ್‌ಒ ಡಾ. ಮಹೇಶ್ ಬಿರಾದಾರ ಅವರು ಕಠಿಣ ಎಚ್ಚರಿಕೆ ನೀಡಿದರು.

ದಾಳಿಯ ಸುದ್ದಿ ತಿಳಿದ ಕೂಡಲೇ ಕೆಲವು ಆಸ್ಪತ್ರೆಗಳು ಬೀಗ ಹಾಕಿಕೊಂಡು ಪರಾರಿಯಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಸಾರ್ವಜನಿಕರೂ ಎಚ್ಚೆತ್ತುಕೊಂಡು, ಅರ್ಹತೆ ಇಲ್ಲದ ವೈದ್ಯರಿಂದ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸಮೀರ ಅಹ್ಮದ್ ಗುಂಡಗಿ ಮತ್ತು ದೇವಪ್ಪ ಪಾಸೋಡಿ ಉಪಸ್ಥಿತರಿದ್ದರು.

Edited By : Vijay Kumar
PublicNext

PublicNext

02/05/2026 08:42 pm

Cinque Terre

9.8 K

Cinque Terre

0