ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಕಾರು ಮಾಲೀಕನಿಗೆ 'ಹೆಲ್ಮೆಟ್' ದಂಡ; ತಾಂತ್ರಿಕ ಪ್ರಮಾದದ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ

ಸಾಗರ: ಇತ್ತೀಚೆಗೆ ಸಾಗರ ಪಟ್ಟಣದಲ್ಲಿ ಕಾರು ಮಾಲೀಕರೊಬ್ಬರಿಗೆ ಹೆಲ್ಮೆಟ್ ಧರಿಸದ ಕಾರಣಕ್ಕಾಗಿ ದಂಡ ವಿಧಿಸಿದ ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ದಿನಾಂಕ 01/05/2026 ರಂದು ನಡೆದ ಈ ಘಟನೆಯು ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಇದು ಕೇವಲ ತಾಂತ್ರಿಕ ಪ್ರಮಾದದಿಂದ ಸಂಭವಿಸಿದ ತಪ್ಪೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಪೊಲೀಸ್ ಇಲಾಖೆ ಈಗ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ವಾಸ್ತವವಾಗಿ ಆ ಕಾರನ್ನು 'ನೋ ಪಾರ್ಕಿಂಗ್' ವಲಯದಲ್ಲಿ ನಿಲುಗಡೆ ಮಾಡಲಾಗಿತ್ತು, ಆದರೆ ದಂಡ ದಾಖಲಿಸುವಾಗ ಆದ ಕೈತಪ್ಪಿನಿಂದ ಈ ಗೊಂದಲ ಸೃಷ್ಟಿಯಾಗಿತ್ತು.

ಇತ್ತೀಚೆಗೆ ಜಾರಿಗೆ ತರಲಾದ ಐಟಿಎಂಎಸ್ (ITMS) ತಂತ್ರಾಂಶದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕಾರವನ್ನು ದಾಖಲಿಸುವಾಗ ಸಿಬ್ಬಂದಿಯೊಬ್ಬರು ಮಾಡಿದ ಮಾನವ ಸಹಜ ತಪ್ಪಿನಿಂದಾಗಿ ಈ ಪ್ರಮಾದ ಸಂಭವಿಸಿದೆ. ಪಾರ್ಕಿಂಗ್ ನಿಯಮ ಉಲ್ಲಂಘನೆಯ ಬದಲಾಗಿ 'ಹೆಲ್ಮೆಟ್ ರಹಿತ ಚಾಲನೆ' ಎಂಬ ಚಲನ್ ಸೃಷ್ಟಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ದೋಷಪೂರಿತ ಚಲನ್ ಅನ್ನು ರದ್ದುಗೊಳಿಸಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177ರ ಅಡಿಯಲ್ಲಿ 'ನಿಲುಗಡೆ ನಿಷೇಧಿತ ವಲಯದಲ್ಲಿ ವಾಹನ ನಿಲುಗಡೆ' ಎಂದು ಮರು ವರ್ಗೀಕರಿಸಿ ಹೊಸ ಚಲನ್ ವಿಧಿಸಲಾಗಿದೆ.

ಸಾಗರ ಪೊಲೀಸ್ ಉಪವಿಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಜಾರಿಯಲ್ಲಿರುವ ಐಟಿಎಂಎಸ್ (Intelligent Traffic Management System) ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿದೆ. ಈ ವ್ಯವಸ್ಥೆಯಡಿ ಪ್ರತಿಯೊಂದು ಉಲ್ಲಂಘನೆಯನ್ನು ಜಿಪಿಎಸ್ ಜಿಯೋ ಟ್ಯಾಗ್ ಮಾಡಿದ ಫೋಟೋದೊಂದಿಗೆ ಸೆರೆಹಿಡಿಯಲಾಗುತ್ತದೆ. ಇದರಲ್ಲಿ ಘಟನೆ ನಡೆದ ನಿಖರವಾದ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿ ಇರುತ್ತದೆ. ಅಲ್ಲದೆ, ಪ್ರತಿ ಚಲನ್‌ನಲ್ಲೂ ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಿಸುವಂತಹ ಫೋಟೋವನ್ನು ಸಾಕ್ಷಿಯಾಗಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದ್ದು, ನಾಗರಿಕರು ಸಾಕ್ಷ್ಯಧಾರಗಳನ್ನು ಪರಿಶೀಲಿಸಲು ಮುಕ್ತ ಅವಕಾಶವಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಾಗರ ಉಪವಿಭಾಗದ ಎಎಸ್‌ಪಿ ಡಾ. ಬೆನಕ್ ಪ್ರಸಾದ್ (ಐಪಿಎಸ್) ಅವರು, "ತಾಂತ್ರಿಕ ವ್ಯವಸ್ಥೆ ಸುಧಾರಿತವಾಗಿದ್ದರೂ ಅಪರೂಪಕ್ಕೆ ಮಾನವ ಸಹಜ ತಪ್ಪುಗಳು ಸಂಭವಿಸಬಹುದು. ಇಂತಹ ಮುಜುಗುರ ತರುವ ತಪ್ಪುಗಳು ಮರುಕಳಿಸದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಸಾರ್ವಜನಿಕರಿಗೆ ದಂಡದ ಚಲನ್ ಬಗ್ಗೆ ಯಾವುದೇ ಆಕ್ಷೇಪಗಳಿದ್ದಲ್ಲಿ, ಅವರು ಸ್ಪಷ್ಟೀಕರಣಕ್ಕಾಗಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು," ಎಂದು ಮನವಿ ಮಾಡಿದ್ದಾರೆ.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”

Edited By : PublicNext Desk
Kshetra Samachara

Kshetra Samachara

03/05/2026 02:31 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ