ಶಿವಮೊಗ್ಗ : ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಒತ್ತಡ, ವೇತನ ವಿಳಂಬ, ಸ್ಥಳ ನಿಯುಕ್ತಿ ಸೇವಾ ರಕ್ಷಣೆ, ಮೀನಾಕ್ಷಿ ಸುಂದರಂ ವರದಿ ಜಾರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಪರಮೇಶ್ ಮಾತನಾಡಿ, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿ ಹಾಗೂ ಕೋತಬಾಲ ಎರಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ) ಕರ್ತವ್ಯ ನಿರ್ವಹಿಸುತ್ತಿದ್ದ 46 ವರ್ಷದ ಮುಕ್ತಂ ಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ ಹಾಗೂ ಹಿಂದಿನ ಪ್ರಕರಣ ಒಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ 8-9 ತಿಂಗಳಿಂದ ಅವರಿಗೆ ಯಾವುದೇ ವೇತನವಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಅವರು ಎಷ್ಟೊಂದು ಮಾನಸಿಕ ಯಾತನೆ ಅನುಭವಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ನಿರಂತರ ಒತ್ತಡಗಳು ಹಾಗೂ ಅನುಭವಿಸುತ್ತಿರುವ ಅಕಾಲಿಕ ಸಾವುಗಳ ಕುರಿತು ಅಧ್ಯಯನ ಮಾಡಲು ಕಳೆದ ಒಂದು ವರ್ಷದ ಹಿಂದೆ ಮೀನಾಕ್ಷಿ ಸುಂದರಂ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಸಮಿತಿಯು ಇದುವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಮುಕ್ತಂ ಹುಸೇನ ಕರಡಿಗುಡ್ಡ ಅವರ ಸಾವಿಗೆ ನ್ಯಾಯ ಒದಗಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಆತ್ಮಹತ್ಯೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
Kshetra Samachara
05/05/2026 04:59 pm
LOADING...