ಸಾಗರ: ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ್ ಹೋಟೆಲ್ ವೃತ್ತದಲ್ಲಿ ಸೋಮವಾರ ಸಂಜೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಒಟ್ಟುಗೂಡಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಕೇಸರಿ ಪಡೆಯ ಯಶಸ್ಸನ್ನು ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರ ಪರ ಘೋಷಣೆಗಳು ಈ ಸಂದರ್ಭದಲ್ಲಿ ಮೊಳಗಿದವು.
ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮಹಿಳಾ ಮುಖಂಡೆ ಡಾ. ರಾಜನಂದಿನಿ ಕಾಗೋಡು, ದೇಶದ ಭೂಪಟದ ಶೇ. 80ರಷ್ಟು ಭಾಗದಲ್ಲಿ ಇಂದು ಕೇಸರಿ ಧ್ವಜ ಹಾರಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. "ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರ ಸಮರ್ಥ ನಾಯಕತ್ವಕ್ಕೆ ಜನತೆ ಭವ್ಯ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ಬಿಜೆಪಿ ಇಂದು ತನ್ನ ಅಸ್ತಿತ್ವವನ್ನು ಬಲವಾಗಿ ಸ್ಥಾಪಿಸಿದೆ. ಮಹಿಳಾ ಶಕ್ತಿ ಮತ್ತು ಯುವಕರ ಬೆಂಬಲವೇ ಪಕ್ಷದ ನಿಜವಾದ ಶಕ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ಇಡೀ ಭಾರತ ಕೇಸರಿಮಯವಾಗಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಮಾತನಾಡಿ, ಪಶ್ಚಿಮ ಬಂಗಾಳದ ನೆಲದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸು ಇಂದು ನನಸಾಗಿದೆ ಎಂದು ಬಣ್ಣಿಸಿದರು. "ಕೇವಲ 3 ಸ್ಥಾನ ಹೊಂದಿದ್ದ ಬಿಜೆಪಿ ಇಂದು 200ರ ಗಡಿ ದಾಟಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವುದು ಸಾಮಾನ್ಯ ಸಾಧನೆಯಲ್ಲ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮೊದಲ ಅಗ್ನಿಪರೀಕ್ಷೆಯಲ್ಲಿ ಪಕ್ಷ ಭರ್ಜರಿ ಜಯ ದಾಖಲಿಸಿದೆ. ಅಮಿತ್ ಶಾ ಅವರ ತಂತ್ರಗಾರಿಕೆ ಹಾಗೂ ಮೋದಿ ಅವರ ಜನಪ್ರಿಯತೆಗೆ ಈ ಗೆಲುವು ಸಾಕ್ಷಿಯಾಗಿದೆ. ಬದಲಾವಣೆಯ ಈ ಗಾಳಿ ಶೀಘ್ರದಲ್ಲೇ ಕೇರಳಕ್ಕೂ ವ್ಯಾಪಿಸಲಿದ್ದು, ಅಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ," ಎಂದು ಹರ್ಷ ವ್ಯಕ್ತಪಡಿಸಿದರು.
ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”
Kshetra Samachara
04/05/2026 08:56 pm