ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ ರಜೆಯ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ ಮಧ್ಯಾಹ್ನ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಬ್ರಹ್ಮಾವರದ ಆಕಾಶವಾಣಿ ವೃತ್ತದ ಬಳಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ವಿವಿಧ ಭಾಗಗಳಿಂದ ಬಂದ ವಾಹನಗಳ ಸಂಖ್ಯೆ ದಿಢೀರ್ ಏರಿಕೆಯಾಯಿತು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಕಿಲೋಮೀಟರ್‌ಗಟ್ಟಲೆ ಸಾಲು ಕಂಡುಬಂದಿತು.
ಶುಭ ಕಾರ್ಯಗಳ ಅಬ್ಬರ, ಪಾರ್ಕಿಂಗ್ ಸಮಸ್ಯೆ,
ಮೇ ತಿಂಗಳಲ್ಲಿ ರಜಾ ದಿನಗಳಾಗಿರುವುದರಿಂದ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಭಾಗದಲ್ಲಿ ಸಾಲು ಸಾಲು ಮದುವೆ, ಉಪನಯನ, ಕೋಲ ಹಾಗೂ ಗೃಹಪ್ರವೇಶದಂತಹ ಶುಭಕಾರ್ಯಗಳು ನಡೆಯುತ್ತಿವೆ.
ಬಂಟರ ಭವನದಿಂದ ಶ್ಯಾಮಿಲಿ ಶಹನಾಯ್ ಹಾಲ್ ವರೆಗೆ ಅನೇಕ ಸಭಾಭವನಗಳಿದ್ದರೂ, ಅಲ್ಲಿ ಸರಿಯಾದ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಇಲ್ಲದಿರುವುದು ಈ ದಟ್ಟಣೆಗೆ ಮುಖ್ಯ ಕಾರಣವಾಗಿದೆ.
ಅನಿವಾರ್ಯವಾಗಿ ವಾಹನಗಳನ್ನು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿನ ಸಂಚಾರ ದಟ್ಟಣೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಸಾರ್ವಜನಿಕರು ಫ್ಲೈ ಓವರ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತುರ್ತು ಗಮನ ಹರಿಸಿ, ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ಹೇರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
03/05/2026 06:55 pm
LOADING...