ಲಾತೂರ್ : ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಆನಂದ್ ನಗರದಲ್ಲಿ ಮನಕಲಕುವ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಕಣ್ಣು ಮಿಟುಕಿಸುವುದರೊಳಗೆ ನಡೆದ ಈ ಭೀಕರ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ.
ಹೌದು ಲಾತೂರ್‌ನ ಆನಂದ್ ನಗರದ ರಸ್ತೆಯಲ್ಲಿ ಪುಟ್ಟ ಬಾಲಕನೊಬ್ಬ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಮೋಟಾರ್ ಸೈಕಲ್ ಸವಾರ ನಿಯಂತ್ರಣ ಕಳೆದುಕೊಂಡು ನೇರವಾಗಿ ಬಾಲಕನಿಗೆ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ಬಾಲಕ ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರಸ್ತುತ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಭೀಕರ ಅಪಘಾತದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೈಕ್ ಸವಾರನ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ನಡೆದ ತಕ್ಷಣ ಬೈಕ್ ಸವಾರ ಅಲ್ಲಿಂದ ಪರಾರಿಯಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆತನ ಪತ್ತೆಗೆ ಜಾಲ ಬೀಸಿದ್ದಾರೆ.
PublicNext
04/05/2026 01:23 pm
LOADING...