ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಆರಂಭಿಕ ಟ್ರೆಂಡ್‌ಗಳಲ್ಲಿ ಅಚ್ಚರಿಯ ಮುನ್ನಡೆ ಸಾಧಿಸಿದೆ. ವಿಜಯ್ ಅವರ ರಾಜಕೀಯ ಪದಾರ್ಪಣೆಯ ಭರ್ಜರಿ ಯಶಸ್ಸಿನ ಸೂಚನೆ ಸಿಗುತ್ತಿದ್ದಂತೆ, ಚೆನ್ನೈನಲ್ಲಿರುವ ಅವರ ನಿವಾಸದ ಸುತ್ತ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳುತ್ತಿರುವ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ ಏಕಸ್ವಾಮ್ಯಕ್ಕೆ ಈ ಬಾರಿ ವಿಜಯ್ ದೊಡ್ಡ ಪೆಟ್ಟು ನೀಡುವ ಮುನ್ಸೂಚನೆ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ (ಕೆಲವು ವರದಿಗಳ ಪ್ರಕಾರ 110+) ಮುನ್ನಡೆ ಸಾಧಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಎಎನ್‌ಐ (ANI) ವರದಿಯ ಪ್ರಕಾರ, ವಿಜಯ್ ಅವರ ಚೆನ್ನೈ ನಿವಾಸದ ಹೊರಗೆ ಬೆಂಬಲಿಗರು ಮತ್ತು ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಸಂಭ್ರಮಾಚರಣೆ ಮಿತಿಮೀರದಂತೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಲೋಹ ಶೋಧಕ ಯಂತ್ರಗಳನ್ನು (Metal Detectors) ಅಳವಡಿಸಲಾಗಿದ್ದು, ಜನಜಂಗುಳಿಯನ್ನು ನಿಯಂತ್ರಿಸಲು ಹರಸಾಹಸ ಪಡಲಾಗುತ್ತಿದೆ.
ಈ ಬಾರಿ ತಮಿಳುನಾಡಿನಲ್ಲಿ ಸುಮಾರು 85.1% ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದೆ. ಚೊಚ್ಚಲ ಚುನಾವಣೆಯಲ್ಲೇ ವಿಜಯ್ ನೇತೃತ್ವದ TVK ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಭದ್ರಕೋಟೆಗಳಲ್ಲೇ ವಿಜಯ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವ ಆರಂಭವಾಗಲಿದೆಯೇ? 'ದಳಪತಿ'ಯ ಈ ಗೆಲುವಿನ ಓಟ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದು ಸಂಜೆಯ ವೇಳೆಗೆ ಸ್ಪಷ್ಟವಾಗಲಿದೆ. ಸದ್ಯಕ್ಕಂತೂ ಇಡೀ ತಮಿಳುನಾಡು ವಿಜಯ್ ಅವರ ಈ ಐತಿಹಾಸಿಕ ರಾಜಕೀಯ ಪಯಣವನ್ನು ಕಾತರದಿಂದ ಗಮನಿಸುತ್ತಿದೆ.
PublicNext
04/05/2026 04:54 pm