ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಸೂರು ಅಣುವಿದ್ಯುತ್ ಸ್ಥಾವರ ಯೋಜನೆಗೆ ಶಾಸಕ ಬೇಳೂರು ತೀವ್ರ ವಿರೋಧ : ಹೋರಾಟದ ಎಚ್ಚರಿಕೆ

ಸಾಗರ: ತಾಲ್ಲೂಕಿನ ಬೇಸೂರಿನಲ್ಲಿ ಪ್ರಸ್ತಾಪಿತ ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಕೈಬಿಡಬೇಕು. ಈ ಭಾಗದ ಜನರ ಹಿತರಕ್ಷಣೆಗಾಗಿ ನಾನು ಎಂತಹ ಹೋರಾಟಕ್ಕೂ ಸಿದ್ಧನಿದ್ದು, ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಸರ್ಕಾರದ ವಿರುದ್ಧ ನಿಲ್ಲಲು ಹಿಂಜರಿಯುವುದಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಕೋಳೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಅವರು, ಈ ಭಾಗದ ಜನರು ಈಗಾಗಲೇ ಎರಡು ಬಾರಿ ವಿದ್ಯುತ್ ಯೋಜನೆಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಮತ್ತೊಂದು ಮಾರಕ ಯೋಜನೆಯನ್ನು ಅವರ ಮೇಲೆ ಹೇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತು ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಯೋಜನೆ ರದ್ದುಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದು, ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಶಾಸಕರು ತಿಳಿಸಿದರು. ಸಂಸದ ಬಿ.ವೈ. ರಾಘವೇಂದ್ರ ಅವರು ಸಹ ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಮಲೆನಾಡು ಭಾಗದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಉದ್ದೇಶಿತ ಅಣು ಸ್ಥಾವರಕ್ಕೆ ವಿರೋಧ ವ್ಯಕ್ತಪಡಿಸಿ ಈ ಭಾಗದ ಒಂಬತ್ತು ಗ್ರಾಮ ಪಂಚಾಯ್ತಿಗಳಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಮಂಗಳವಾರ ವೈಯಕ್ತಿಕವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುವುದಾಗಿ ಅವರು ಭರವಸೆ ನೀಡಿದರು.

ಲಿಂಗನಮಕ್ಕಿ ಅಣೆಕಟ್ಟಿನ ಸಮೀಪವಿರುವ ಬೇಸೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು ಪರಿಸರ ಸೂಕ್ಷ್ಮ ವಲಯಗಳಾಗಿದ್ದು, ಇಲ್ಲಿನ ದಟ್ಟ ಅರಣ್ಯ ಮತ್ತು ಜೀವವೈವಿಧ್ಯವು ಅಣು ಸ್ಥಾವರದಿಂದ ನಾಶವಾಗುವ ಭೀತಿ ಇದೆ. ಶರಾವತಿ ಹಿನ್ನೀರು ಕುಡಿಯುವ ನೀರಿನ ಮೂಲವಾಗಿದ್ದು, ಯೋಜನೆಯಿಂದ ಸಂಪೂರ್ಣ ಪರಿಸರ ಹದಗೆಡಲಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಭೆಯಲ್ಲಿದ್ದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಮಾತನಾಡಿ, ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳಿಗೆ ವಾಸ್ತವ ವರದಿಯನ್ನು ಸಲ್ಲಿಸಲಾಗುವುದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರದೀಪ್, ತಾ.ಪಂ ಇಒ ಶಿವಪ್ರಕಾಶ್ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ. ಇಂದುಧರ ಬೇಸೂರು ಉಪಸ್ಥಿತರಿದ್ದರು.ಜಮೀಲ್ ಸಾಗರ್ "ಪಬ್ಲಿಕ್ ನೆಕ್ಸ್ಟ್ ಸಾಗರ"

Edited By : PublicNext Desk
Kshetra Samachara

Kshetra Samachara

04/05/2026 06:47 pm

Cinque Terre

980

Cinque Terre

0