ಸಾಗರ: ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ 'ಪ್ಲಾಸ್ಟಿಕ್ ಮುಕ್ತ ಸಾಗರ' ಅಭಿಯಾನಕ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಚಾಲನೆ ನೀಡಿದರು. ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 'ಪ್ಲಾಸ್ಟಿಕ್ ಬಾಟಲಿ ಸಂಗ್ರಹ ಕೇಂದ್ರ'ವನ್ನು (Plastic Bottle Collection Booth) ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವ ಅಭ್ಯಾಸ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಆಸ್ಪತ್ರೆಯಂತಹ ಜಾಗಗಳಲ್ಲಿ ಜನರು ಕುಡಿದು ಎಸೆದ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಶುಚಿತ್ವ ಉಂಟಾಗುತ್ತಿದೆ.
ಇದನ್ನು ಮನಗಂಡ ಲಯನ್ಸ್ ಕ್ಲಬ್‌ನ ಈ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ನಾನು ಸದಾ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.
ತಮ್ಮ ವಿದೇಶಿ ಪ್ರವಾಸದ ಅನುಭವವನ್ನು ಹಂಚಿಕೊಂಡ ಬೇಳೂರು ಅವರು, ಬೆಲ್ಜಿಯಂನಂತಹ ದೇಶಗಳಲ್ಲಿ ಸಾರ್ವಜನಿಕರು ಶಿಸ್ತಿನಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಗದಿತ ಯಂತ್ರಗಳಿಗೆ ಹಾಕುವ ಪದ್ಧತಿ ಹೊಂದಿದ್ದಾರೆ. ಅಲ್ಲಿನ ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾದರಿಯಾಗಿದೆ. ನಮ್ಮಲ್ಲಿಯೂ ಸಹ ಜನರು ಅಂತಹ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅತಿ ಮುಖ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿಗೆ ಇಂತಹ ಬೂತ್‌ಗಳು ಸಹಕಾರಿಯಾಗಲಿವೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
Kshetra Samachara
04/05/2026 08:10 pm