ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರದಲ್ಲಿ ತೈಲ ಅಭಾವ: ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪೆಟ್ರೋಲ್ ಬಂಕ್‌ಗಳು ಬಂದ್

ಸಾಗರ: ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆಯೇ, ಇತ್ತ ಮಲೆನಾಡಿನ ಹೆಬ್ಬಾಗಿಲು ಸಾಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತಲೆದೂರಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿದ್ದ ಇಂಧನ ಪೂರೈಕೆ, ಫಲಿತಾಂಶ ಹೊರಬಿದ್ದ ದಿನದಂದೇ ದಿಢೀರ್ ಸ್ಥಗಿತಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳ ಮುಂದೆ 'ನೋ ಸ್ಟಾಕ್' (No Stock) ನಾಮಫಲಕಗಳು ರಾರಾಜಿಸುತ್ತಿದ್ದು, ವಾಹನ ಸವಾರರು ತೈಲಕ್ಕಾಗಿ ಅಲೆದಾಡುವಂತಾಗಿದೆ.

ಸೋಮವಾರ ರಾತ್ರಿಯಿಂದಲೇ ಸಾಗರ ನಗರದ ಬಹುತೇಕ ಇಂಧನ ಕೇಂದ್ರಗಳು ಬಾಗಿಲು ಹಾಕಿವೆ. ಇದರಿಂದಾಗಿ ಕೆಲಸ ಕಾರ್ಯಗಳಿಗಾಗಿ ತೆರಳುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ತುರ್ತು ಸೇವೆಗಳ ವಾಹನಗಳು ಪೆಟ್ರೋಲ್ ಸಿಗದೆ ಪರದಾಡುತ್ತಿವೆ. "ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆ ಮಾಡದೆ ಶಾಂತವಾಗಿದ್ದ ಕಂಪನಿಗಳು, ಈಗ ಫಲಿತಾಂಶ ಬಂದ ಕೂಡಲೇ ಕೃತಕ ಅಭಾವ ಸೃಷ್ಟಿಸಿ ದರ ಏರಿಸುವ ತಂತ್ರ ರೂಪಿಸಿವೆ" ಎಂದು ಸ್ಥಳೀಯ ವಾಹನ ಸವಾರರು ಕಿಡಿಕಾರುತ್ತಿದ್ದಾರೆ. ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದ ಜನರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಇಂಧನ ಪೂರೈಕೆ ಸ್ಥಗಿತದ ಬಗ್ಗೆ ಬಂಕ್ ಮಾಲೀಕರನ್ನು ವಿಚಾರಿಸಿದರೆ, "ಮೇಲಿನಿಂದಲೇ ಲೋಡ್ ಬಂದಿಲ್ಲ" ಎಂಬ ಸಬೂಬು ನೀಡುತ್ತಿದ್ದಾರೆ. ಆದರೆ, ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆಮಾಡಿದೆ. ಪ್ರತಿ ಬಾರಿ ಚುನಾವಣೆಗಳು ಮುಗಿದ ನಂತರ ತೈಲ ಬೆಲೆ ಏರಿಕೆಯಾಗುವುದು ಸಾಮಾನ್ಯವಾಗಿದ್ದು, ಈ ಬಾರಿಯೂ ಅದೇ ಹಾದಿಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಗರದಂತಹ ಪ್ರಮುಖ ವಾಣಿಜ್ಯ ಕೇಂದ್ರದಲ್ಲಿ ಇಂಧನ ಪೂರೈಕೆ ಸ್ಥಗಿತಗೊಂಡರೆ ಇಡೀ ತಾಲ್ಲೂಕಿನ ಆರ್ಥಿಕ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣವೇ ಇಂಧನ ಪೂರೈಕೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

04/05/2026 10:52 pm

Cinque Terre

52.36 K

Cinque Terre

0

ಸಂಬಂಧಿತ ಸುದ್ದಿ