ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲಯಾಳಂ ಸಿನಿಮಾ ನಟ ಸಂತೋಷ್ ಕೆ ನಾಯರ್ ಅಪಘಾತದಲ್ಲಿ ದುರ್ಮರಣ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ಕೆ ನಾಯರ್ ಅವರು ಮಂಗಳವಾರ ಬೆಳಿಗ್ಗೆ ಕೇರಳದ ಪತ್ತನಂತಿಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ ಮುಂಜಾನೆ ಸಂತೋಷ್ ಕೆ ನಾಯರ್ ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬಂದ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ಪತ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂತೋಷ್ ಕೆ ನಾಯರ್ ಅವರು 1982ರಲ್ಲಿ ತೆರೆಕಂಡ ‘ಇದು ಞಂಙಳುಡೆ ಕಥಾ’ (Ithu Njangalude Katha) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು, ಖಳನಾಯಕ ಹಾಗೂ ಹಾಸ್ಯಪಾತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದರು.

ಸಂತೋಷ್ ಕೇಶವನ್ ನಾಯರ್ ಅವರ ತಂದೆ ಸಿ.ಎನ್. ಕೇಶವನ್ ನಾಯರ್ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರೆ, ತಾಯಿ ಪಿ. ರಾಜಲಕ್ಷ್ಮಿಯಮ್ಮ ನಿವೃತ್ತ ಶಿಕ್ಷಕಿಯಾಗಿದ್ದರು. ಕಾಲೇಜು ದಿನಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸಂತೋಷ್, ತಮ್ಮ ಸಹೋದರಿಯರು ಸ್ತ್ರೀರೋಗ ತಜ್ಞರಾಗಿದ್ದರೂ, ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡಿದ್ದರು. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರೊಂದಿಗೆ ಸಂತೋಷ್ ಕೆ ನಾಯರ್ ಅವರಿಗೆ ಆಪ್ತ ಸ್ನೇಹಬಂಧವಿತ್ತು. ಇಬ್ಬರೂ ಎಂಜಿ ಕಾಲೇಜಿನಲ್ಲಿ ಒಂದೇ ಸಮಯದಲ್ಲಿ ವ್ಯಾಸಂಗ ಮಾಡಿದ್ದರು; ಸಂತೋಷ್ ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದರೆ, ಮೋಹನ್‌ಲಾಲ್ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದರು.

Edited By : Nagaraj Tulugeri
PublicNext

PublicNext

05/05/2026 06:28 pm

Cinque Terre

9.8 K

Cinque Terre

0