ಧಾರವಾಡ: ವಿದ್ಯಾಕಾಶಿ. ಈ ಹೆಸರು ಇರೋದು ಕವಿ, ಕಾವ್ಯಗಳ ತವರೂರು ಎನಿಸಿಕೊಂಡಿರುವ ಧಾರವಾಡಕ್ಕೆ ಮಾತ್ರ. ಕಾಲವೊಂದಿತ್ತು. ಧಾರವಾಡ ಎಂದರೆ ಅದು ಸುಸಂಸ್ಕೃತರ ನಗರ, ವಿದ್ಯಾರ್ಥಿಗಳಿಗೆ ಅದು ಕಾಶಿ ಎನಿಸಿಕೊಂಡಿತ್ತು. ಇದಕ್ಕೆ ಕಾರಣ ಇಲ್ಲಿರುವ ಕವಿಗಳು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು. ಆದರೆ, ಈಗ ಈ ನಗರಕ್ಕೆ ರಕ್ತದ ಕಲೆ, ಕೊಲೆ, ಸುಲಿಗೆ ದರೋಡೆ ಹಾಗೂ ಮೋಸದಂತಹ ಕಲೆಗಳು ಅಂಟಿಕೊಂಡಿವೆ.
ವಿಚಿತ್ರ ಎಂದರೆ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕಳೆದ ಐದಾರು ತಿಂಗಳುಗಳಿಂದ ಕಾಯಂ ಇನ್‌ಸ್ಪೆಕ್ಟರ್ ನೇಮಕವೇ ಆಗಿಲ್ಲ. ಈ ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಾಗಿದ್ದು, ಇದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಪ್ರತಿನಿತ್ಯ ಒಂದಿಲ್ಲೊಂದು ಕ್ರೈಂಗಳು ನಡೆಯುತ್ತಲೇ ಇವೆ.
ಕೊಲೆ, ಮನೆಗಳ್ಳತನ ಸೇರಿದಂತೆ ಅನೇಕ ಕ್ರೈಂಗಳು ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಹೆಚ್ಚು ನಡೆಯುತ್ತಿರುವುದರಿಂದ ಉಪನಗರ ಠಾಣೆಗೆ ಪರ್ಯಾಯವಾಗಿ ಇನ್ನೊಂದು ಪೊಲೀಸ್ ಠಾಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದ್ದರೂ ಸರ್ಕಾರ ಮಾತ್ರ ಕಿವಿಗೊಡುತ್ತಿಲ್ಲ. ಇರುವ ಈ ಉಪನಗರ ಠಾಣೆಗೆ ಇದುವರೆಗೂ ಕಾಯಂ ಇನ್‌ಸ್ಪೆಕ್ಟರ್ ನೇಮಕವಾಗದೇ ಇರುವುದು ಅಪರಾಧ ಕೃತ್ಯಗಳು ಹೆಚ್ಚಾಗುವಂತೆ ಮಾಡಿದೆ.
ಕೇವಲ ಈ ಠಾಣೆ ಮಾತ್ರವಲ್ಲ, ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ, ಅದರಲ್ಲಿ ಕೆಲವು ಬೆಳಕಿಗೆ ಬಂದು ದೊಡ್ಡ ಸುದ್ದಿಯಾದರೆ ಬೆಳಕಿಗೆ ಬರದೇ ಅಲ್ಲೇ ಮುಚ್ಚಿ ಹೋದ ಪ್ರಕರಣಗಳು ಸಾಕಷ್ಟಿವೆ.
ಗಾಂಜಾ ಸೇವನೆ ಮಾಡದೇ ಇರುವ ವಿದ್ಯಾರ್ಥಿ ಬಳಿ ಹಣಕ್ಕೆ ಬೇಡಿಕೆ ಇಟ್ಟು ಆ ವಿದ್ಯಾರ್ಥಿ ಸಾವಿಗೆ ಕಾರಣವಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ವಿಚಿತ್ರ. ರಕ್ಷಿಸಬೇಕಾದವರೇ ಭಕ್ಷಕರಾಗಿರುವಾಗ ಜನ ಸಾಮಾನ್ಯರಿಗೆ ನ್ಯಾಯ ಎಲ್ಲಿದೆ ಎಂಬಂತಾಗಿದೆ.
ಖಡಕ್ ಐಪಿಎಸ್ ಆಫೀಸರ್ ಎನಿಸಿಕೊಂಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಮೇಲೆಯೇ ಗಂಭೀರ ಸ್ವರೂಪದ ಆರೋಪಗಳನ್ನು ವಿಪಕ್ಷದ ಶಾಸಕರಷ್ಟೇ ಅಲ್ಲ ಆಡಳಿತಾರೂಢ ಪಕ್ಷದ ಶಾಸಕರೇ ಮಾಡುತ್ತಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿ ಡೀಲರ್‌ಗಳ ಕಚೇರಿಯಾಗಿದೆ ಎಂಬ ಆರೋಪವನ್ನು ವಿಪಕ್ಷದ ಶಾಸಕರು ಮಾಡಿದರೆ, ಹುಬ್ಬಳ್ಳಿ, ಧಾರವಾಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ ಎಂದು ಆಡಳಿತಾರೂಢ ಪಕ್ಷದ ಶಾಸಕರೇ ಮಾಡುತ್ತಿದ್ದಾರೆ.
ಶಾಂತಿನಗರ ಎನಿಸಿಕೊಂಡಿದ್ದ ಧಾರವಾಡದಲ್ಲಿ ಮನೆಗೆ ನುಗ್ಗಿ ಭೀಕರವಾಗಿ ಫೈರೋಜ್ ಪಠಾಣ್ ಹತ್ಯೆ ನಡೆದಿದ್ದು ಧಾರವಾಡಿಗರ ಎದೆ ನಡುಗಿಸಿದೆ. ಇದು ಒಂದೆಡೆಯಾದರೆ ಪ್ರತಿನಿತ್ಯ ಒಂದಿಲ್ಲೊಂದು ಮನೆಗಳ್ಳತನ, ವಂಚನೆ ಪ್ರಕರಣ, ಅತ್ಯಾಚಾರ ನಡೆಯುತ್ತಲೇ ಇರುತ್ತವೆ. ಈ ಎಲ್ಲ ಅಪರಾಧ ಕೃತ್ಯಗಳಿಂದ ವಿದ್ಯಾಕಾಶಿ ಎನಿಸಿಕೊಂಡಿರುವ ಧಾರವಾಡಕ್ಕೆ ಇದೀಗ ರಕ್ತ ಕಲೆ ಅಂಟಿಕೊಂಡಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/05/2026 03:43 pm