ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವ ಸಂಘದಿಂದಲೇ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ಆರಂಭ

ಧಾರವಾಡ: ಕರ್ನಾಟಕ ಏಕೀಕರಣ, ಗೋಕಾಕ ಚಳವಳಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘ ಇದೀಗ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯ ಹೋರಾಟಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.

ಹೌದು! ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಬೇಕು. ಧಾರವಾಡ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಬಿದ್ದಿದೆ ಎಂದು ಅನೇಕ ಸಂಘಟನೆಗಳು, ಸಮಾನ ಮನಸ್ಕರರು, ಸಾಹಿತಿಗಳು ಹಾಗೂ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಹೋರಾಟ ಮಾಡಿದ್ದರು. ಈ ಹೋರಾಟದ ಫಲವಾಗಿ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಿಸಿತ್ತು.

ಆದರೆ, ರಾಜಕೀಯ ಮೇಲಾಟದ ಕಾರಣ ಇನ್ನೂ ರಾಜ್ಯಪಾಲರಿಂದ ಅಧಿಕೃತವಾಗಿ ಇದಕ್ಕೆ ಅಂಕಿತ ದೊರಕಿಲ್ಲ. ಇದರ ಮಧ್ಯೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ ಇವರ ಮಹಾನಗರ ಪಾಲಿಕೆಯನ್ನೇ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಠರಾವು ಪಾಸು ಮಾಡಿದೆ.

ಬಿಜೆಪಿಯ ಈ ನಿರ್ಧಾರದಿಂದ ಮತ್ತೊಮ್ಮೆ ಧಾರವಾಡದ ಜನ, ಸಾಹಿತಿಗಳು, ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು, ರಾಜಕೀಯ ನಾಯಕರು ಮತ್ತೊಮ್ಮೆ ಒಂದಾಗಿ ಹೋರಾಟ ನಡೆಸಲು ಹೊರಟಿದ್ದಾರೆ. ಇದರ ಮೊದಲ ಸಭೆ ಇದೇ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೇ ನಡೆದಿದೆ.

ಕೇಂದ್ರದ ಅನುದಾನದ ಹಿನ್ನೆಲೆ ಇದೀಗ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ ಎಂದು ಅಧಿಕಾರದಲ್ಲಿರುವ ಬಿಜೆಪಿ ಠರಾವು ಪಾಸು ಮಾಡಿದೆ. ಒಂದೆಡೆ ಎಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಿಬಿಟ್ಟರೆ ಆ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಹೋಗುತ್ತದೆ ಅಂತಲೋ ಗೊತ್ತಿಲ್ಲ. ಕಳೆದ 10 ತಿಂಗಳಿನಿಂದ ರಾಜ್ಯಪಾಲರ ಬಳಿ ಇರುವ ಪ್ರತ್ಯೇಕ ಮಹಾನಗರ ಪಾಲಿಕೆ ಫೈಲ್‌ಗೆ ಅಂಕಿತ ದೊರಕಿಲ್ಲ.

ಹೀಗಾಗಿ ಧಾರವಾಡದ ಜನತೆ ಪಕ್ಷಾತೀತವಾಗಿ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಧಾರವಾಡ ಬಂದ್ ಮಾಡುವುದು, ಮೇಯರ್, ಉಪಮೇಯರ್ ಮನೆ ಎದುರು ಧರಣಿ ನಡೆಸುವುದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು, ನಿರಂತರ ಧರಣಿ ನಡೆಸುವುದು, ಮೂರು ದಿನದಲ್ಲಿ ರಾಜ್ಯಪಾಲರು ಅಂಕಿತ ಹಾಕುವುದು ಸೇರಿದಂತೆ ಇತ್ಯಾದಿ ನಿರ್ಧಾರಗಳನ್ನು ಕವಿವ ಸಂಘದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಒಟ್ಟಾರೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೇ ಬೇಕು ಎಂಬ ಆಗ್ರಹ ಒಂದೆಡೆಯಾದರೆ, ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರತ್ಯೇಕ ಪಾಲಿಕೆ ಬೇಡ ಎನ್ನುತ್ತಿದೆ. ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಕವಿವ ಸಂಘದಿಂದಲೇ ಮೊದಲ ಹಂತದಲ್ಲಿ ಇದೀಗ ಚಾಲನೆ ದೊರೆತಂತಾಗಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Somashekar
Kshetra Samachara

Kshetra Samachara

06/05/2026 04:55 pm

Cinque Terre

7.9 K

Cinque Terre

1

ಸಂಬಂಧಿತ ಸುದ್ದಿ