ಬೆಂಗಳೂರು: ನಾಡಿನ ಹೆಸರಾಂತ ಪೊಲೀಸ್ ಅಧಿಕಾರಿ, ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರತ ಹಾಗೂ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಕಠಿಣ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪೊಲೀಸ್ ಅಧಿಕಾರಿಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾದ ಪಶ್ಚಿಮ ಸಿಡ್ನಿಯಲ್ಲಿ ಮೇ 17ರಂದು ನಡೆದ ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣ ಸವಾಲಿನ 'ಐರನ್‌ಮ್ಯಾನ್ 70.3' (Ironman 70.3) ಸ್ಪರ್ಧೆಯನ್ನು ಸಂದೀಪ್ ಪಾಟೀಲ್ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದ 6ನೇ 'ಐರನ್‌ಮ್ಯಾನ್' ಸಾಧನೆಯನ್ನು ದಾಖಲಿಸಿ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದ್ದಾರೆ.
ವಿಶೇಷವೆಂದರೆ, ಪರಿಸರ ಜಾಗೃತಿ ಮೂಡಿಸುವ 'ವೃಕ್ಷಥಾನ್'ನ ಬ್ರಾಂಡ್ ಅಂಬಾಸಿಡರ್ ಆಗಿರುವ ಸಂದೀಪ್ ಪಾಟೀಲ್ ಅವರು, ಆಸ್ಟ್ರೇಲಿಯಾದ ಈ ಮ್ಯಾರಥಾನ್ ಓಟದಲ್ಲೂ ಭಾಗವಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಕಠಿಣ ಪೊಲೀಸ್ ಕರ್ತವ್ಯದ ನಡುವೆಯೂ ತಮ್ಮ ಫಿಟ್‌ನೆಸ್ ಹಾಗೂ ಪರಿಸರ ಕಾಳಜಿಯನ್ನು ಕಾಪಾಡಿಕೊಂಡು ಬಂದಿರುವ ಅವರ ಈ ಸಾಧನೆಗೆ ಈಗ ಸಾರ್ವಜನಿಕ ವಲಯ ಹಾಗೂ ಗಣ್ಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
PublicNext
21/05/2026 01:46 pm
LOADING...