ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯ ಬೆನ್ನಲ್ಲೇ ಆರಂಭವಾದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನೇ ಹಿಂದಿಕ್ಕಿ ಭಾರಿ ಸಂಚಲನ ಸೃಷ್ಟಿಸಿರುವ ಈ ಅಭಿಯಾನದ ಬೆಂಬಲಕ್ಕೆ ಇದೀಗ ಕಾಂಗ್ರೆಸ್ ನಾಯಕರು ಧುಮುಕಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಪ್ರಮುಖ ನಾಯಕರು ‘ಐ ಆಮ್ ಕಾಕ್ರೋಚ್’ ಮತ್ತು ‘ಪಿಎಂ ಕಾಂಪ್ರಮೈಸ್’ ಎಂಬ ಬರಹಗಳಿರುವ ಟೀ ಶರ್ಟ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ: ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಟೀ ಶರ್ಟ್ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು.
'ಪರೀಕ್ಷಾ ಪೇ ಚರ್ಚಾ' ಬಿಟ್ಟು 'ಪೇಪರ್ ಲೀಕ್ ಪೇ ಚರ್ಚೆ' ಮಾಡಿ: ಸುರ್ಜೆವಾಲಾ
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಮೋದಿ ಸರ್ಕಾರವು ದೇಶದ ಶಿಕ್ಷಣ ವ್ಯವಸ್ಥೆಯನ್ನು ಮಾಫಿಯಾಗಳಿಗೆ ಒಪ್ಪಿಸಿಬಿಟ್ಟಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಪೇಪರ್ ಲೀಕ್ ದಂಧೆಗೆ ಹೆಸರುವಾಸಿಯಾಗಿತ್ತು. ನೂರಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಬಿಜೆಪಿ ನಾಯಕರ ಮೂಗಿನ ಅಡಿಯಲ್ಲೇ ಸೋರಿಕೆಯಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಇನ್ನು ಮುಂದೆಯಾದರೂ 'ಪರೀಕ್ಷಾ ಪೇ ಚರ್ಚಾ' ಮಾಡುವುದನ್ನು ಬಿಟ್ಟು, 'ಪೇಪರ್ ಲೀಕ್ ಪೇ ಚರ್ಚೆ' ನಡೆಸಲಿ" ಎಂದು ಅವರು ಕುಟುಕಿದರು.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಸಚಿವ ಎಂ.ಸಿ. ಸುಧಾಕರ್ ಕಳವಳ; ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, "ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ದೇಶದ ಸುಮಾರು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇಂದು ಕತ್ತಲಿಗೆ ತಳ್ಳಲ್ಪಟ್ಟಿದೆ. ಕೋಚಿಂಗ್ ಸೆಂಟರ್ ನಡೆಸುವವರೇ ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದೊಂದು ಹಗಲು ದರೋಡೆಯಾಗಿದ್ದು, ಇದರ ಹಿಂದೆ ದೊಡ್ಡ ದಂಧೆಯೇ ಅಡಗಿದೆ" ಎಂದು ಗಂಭೀರ ಆರೋಪ ಮಾಡಿದರು.
PublicNext
21/05/2026 10:22 pm