ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಯೊಂದನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಠಾತ್ ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ವ್ಯಂಗ್ಯಾತ್ಮಕ ಅಭಿಯಾನವು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಡಿಜಿಟಲ್ ಸಂವಹನ ತಂತ್ರಜ್ಞ (Political communication strategist) ಅಭಿಜಿತ್ ದಿಪ್ಕೆ ಆರಂಭಿಸಿರುವ ಈ ಕಾಲ್ಪನಿಕ ರಾಜಕೀಯ ಪಕ್ಷಕ್ಕೆ ಕೇವಲ ಐದೇ ದಿನಗಳಲ್ಲಿ ಕೋಟಿಗೂ ಅಧಿಕ ಯುವಜನರು ಬೆಂಬಲ ಸೂಚಿಸಿದ್ದಾರೆ.
ಹಿನ್ನೆಲೆ ಏನು?
ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರೊಬ್ಬರ ಅರ್ಜಿಯ ವಿಚಾರಣೆ ನಡೆಸುವಾಗ ಸಿಜೆಐ ಸೂರ್ಯ ಕಾಂತ್ ಅವರು, ನಕಲಿ ಪದವಿ ಪಡೆದು ಕಾನೂನು ಕ್ಷೇತ್ರಕ್ಕೆ ಬರುವ ಹಾಗೂ ವ್ಯವಸ್ಥೆಯನ್ನು ದೂಷಿಸುವ ನಿರುದ್ಯೋಗಿ ಯುವಕರನ್ನು "ಜಿರಳೆಗಳು (Cockroaches)" ಮತ್ತು "ಪರಾವಲಂಬಿಗಳು (Parasites)" ಎಂದು ಕರೆದಿದ್ದರು. (ನಂತರ ಸಿಜೆಐ ಅವರು, "ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ, ನಾನು ದೇಶದ ಯುವಶಕ್ತಿಯನ್ನು ನಿಂದಿಸಿಲ್ಲ. ಬದಲಿಗೆ ನಕಲಿ ಪದವಿ ಪಡೆದವರನ್ನು ಮಾತ್ರ ಉಲ್ಲೇಖಿಸಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದರು).
ಆದರೆ, ಯುವ ಸಮುದಾಯವನ್ನು ಜಿರಳೆಗೆ ಹೋಲಿಸಿದ ಸಿಜೆಐ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪನೆ: ಸಿಜೆಐ ಹೇಳಿಕೆಗೆ ವಿಶಿಷ್ಟ ರೀತಿಯಲ್ಲಿ ಪ್ರತಿರೋಧ ಒಡ್ಡಲು ನಿರ್ಧರಿಸಿದ ಅಭಿಜಿತ್ ದಿಪ್ಕೆ, ಮೇ 16 ರಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ಎಂಬ ವ್ಯಂಗ್ಯಾತ್ಮಕ ಡಿಜಿಟಲ್ ವೇದಿಕೆಯನ್ನು ಸ್ಥಾಪಿಸಿದರು. ಈ ಪಕ್ಷದ ಸದಸ್ಯರಾಗಲು ಅವರು ಕೆಲವು ಹಾಸ್ಯಾಸ್ಪದ ಅರ್ಹತೆಗಳನ್ನು ನಿಗದಿ ಪಡಿಸಿದ್ದಾರೆ.
ಅರ್ಜಿದಾರರು ಕಡ್ಡಾಯವಾಗಿ ನಿರುದ್ಯೋಗಿಯಾಗಿರಬೇಕು.
ಸೋಮಾರಿ ಹಾಗೂ ಸದಾ ಆನ್‌ಲೈನ್‌ನಲ್ಲಿ ಇರಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ವೃತ್ತಿಪರರಂತೆ ಆಕ್ರೋಶ ಹೊರಹಾಕುವ (Rant) ಕಲೆ ಗೊತ್ತಿರಬೇಕು.
ಪಕ್ಷದ ಪ್ರಮುಖ 5 ಸೂತ್ರಗಳ ಪ್ರಣಾಳಿಕೆ (Manifesto):
ಯುವಕರ ನಿರುದ್ಯೋಗ ಮತ್ತು ರಾಜಕೀಯ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿರುವ ಈ ಕಾಲ್ಪನಿಕ ಪಕ್ಷವು ತನ್ನದೇ ಆದ 5 ಪ್ರಮುಖ ಪ್ರಣಾಳಿಕೆಗಳನ್ನು ಮುಂದಿಟ್ಟಿದೆ.
ಅದರಲ್ಲಿ ಮುಖ್ಯವಾಗಿ
"ಪಕ್ಷಾಂತರ ಮಾಡುವ ಶಾಸಕರು (MLAs) ಮತ್ತು ಸಂಸದರ (MPs) ಮೇಲೆ ಭವಿಷ್ಯದಲ್ಲಿ ಕನಿಷ್ಠ 20 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕಠಿಣ ನಿಷೇಧ ಹೇರಬೇಕು". ಇದರೊಂದಿಗೆ, ನಿವೃತ್ತಿಯ ನಂತರ ನ್ಯಾಯಮೂರ್ತಿಗಳಿಗೆ ಯಾವುದೇ ರಾಜಕೀಯ ಅಥವಾ ರಾಜ್ಯಸಭಾ ಹುದ್ದೆಗಳನ್ನು ನೀಡಬಾರದು ಮತ್ತು ಪಕ್ಷದ ವ್ಯವಹಾರಗಳನ್ನು ಆರ್‌ಟಿಐ (RTI) ವ್ಯಾಪ್ತಿಗೆ ತರಬೇಕು ಎಂಬ ಅಂಶಗಳೂ ಇವರ ಪ್ರಣಾಳಿಕೆಯಲ್ಲಿವೆ ಎನ್ನಲಾಗಿದೆ.
ಇಂಟರ್ನೆಟ್‌ನಲ್ಲಿ ಹೊಸ ದಾಖಲೆ:
ಕೇವಲ ಹಾಸ್ಯಕ್ಕಾಗಿ ಮತ್ತು ಯುವಕರ ಆಕ್ರೋಶವನ್ನು ಹೊರಹಾಕಲು ಆರಂಭವಾದ ಈ ಪೇಜ್, ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಹ್ಯಾಂಡಲ್‌ಗಳಿಗಿಂತಲೂ ವೇಗವಾಗಿ ಜನಪ್ರಿಯತೆ ಗಳಿಸುತ್ತಿದೆ. ದೇಶದ ಪದವೀಧರರ ನಿರುದ್ಯೋಗ ಸಮಸ್ಯೆಯನ್ನು ಈ ಅಭಿಯಾನವು ಸೂಕ್ಷ್ಮವಾಗಿ ಬಿಂಬಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
PublicNext
21/05/2026 06:13 pm